×
Ad

ಹರೇಕಳ: ಅನಧಿಕೃತ ಪೈಪ್‌ಲೈನ್‌ಗೆ ಗ್ರಾಪಂ ಅಧ್ಯಕ್ಷರಿಂದ ತಡೆ

Update: 2023-07-08 18:22 IST

ಕೊಣಾಜೆ: ಮಳೆಗಾಲದಲ್ಲಿ ರಸ್ತೆಬದಿ ಅಗೆಯುವುದಕ್ಕೆ ನಿಷೇಧವಿದ್ದರೂ ಹರೇಕಳದಲ್ಲಿ ನಡೆಸುತ್ತಿದ್ದ ಪೈಪ್‌ಲೈನ್ ಕಾಮಗಾರಿಗೆ ಪಂಚಾಯತ್ ಅಧ್ಯಕ್ಷರು ಶನಿವಾರ ತಡೆ ನೀಡಿದ್ದಾರೆ.

ಮಳೆಗಾಲದಲ್ಲಿ ರಸ್ತೆಬದಿ ಅಗೆದರೆ ಸಾರ್ವಜನಿಕರಿಗೆ ಅಪಾಯವಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಅಂತಹ ಕಾಮಗಾರಿಗೆ ತಡೆ ಹೇರಿದೆ. ಆದರೂ ಹರೇಕಳದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ರಸ್ತೆಬದಿ ಅಗೆದು ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಜೆಸಿಬಿ ಮೂಲಕ ಅಗೆದು ತೆಗೆಯಲಾದ ಮಣ್ಣು ರಸ್ತೆ ಮೇಲೆ ಹಾಕಲಾಗುತ್ತಿದ್ದುದರಿಂದ ಹಾಗೂ ಅಗೆದ ಜಾಗದಲ್ಲಿ ಹಾಕಲಾದ ಮಣ್ಣು ರಸ್ತೆಗೆ ಬರುತ್ತಿದ್ದುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದರಿಂದ ಹಲವು ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿದ್ದವು. ಅಗೆಯಲಾದ ಜಾಗದಲ್ಲಿ ಹೊಂಡ ಬಿದ್ದು ಅಪಾಯಕಾರಿಯಾಗಿದೆ. ಆದ್ದರಿಂದ ಸ್ಥಳೀಯರು ಗ್ರಾಪಂಗೆ ದೂರು ನೀಡಿದ್ದರು. ಮಳೆಗಾಲದಲ್ಲಿ ಕೆಲಸ ಮಾಡದಂತೆ ಗ್ರಾಪಂ ಇಂಜಿನಿಯರ್‌ಗೆ ಸೂಚಿಸಿತ್ತು. ಆದರೂ ಶನಿವಾರ ಇಂಜಿನಿಯರ್‌ರ ಗಮನಕ್ಕೆ ತಾರದೆ ಜೆಸಿಬಿ ಮೂಲಕ ರಸ್ತೆಬದಿ ಅಗೆಯುತ್ತಿದ್ದುದನ್ನು ಗಮನಿಸಿದ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ ಅವರು ಕಾಮಗಾರಿ ನಿಲ್ಲಿಸಿ ಇಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಗಮನಕ್ಕೆ ತಾರದೆ ಕೆಲಸ ಮಾಡಲಾಗುತ್ತಿದೆ ಎಂದು ಇಂಜಿನಿಯರ್ ಸಮಜಾಯಿಷಿ ನೀಡಿ ಕೆಲಸ ಮಾಡದಂತೆ ಕಾರ್ಮಿಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News