×
Ad

ಉಡುಪಿ ಜಿಲ್ಲೆಯ 200 ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ

Update: 2023-07-16 19:27 IST

ಉಡುಪಿ, ಜು.16: ಉಡುಪಿ ಜಿಲ್ಲಾ ಪೊಲೀಸ್ ಮತ್ತು ದೊಡ್ಡಣ್ಣಗುಡ್ಡೆ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 100ರಿಂದ 200 ಮಾದಕ ವ್ಯಸನಕ್ಕೆ ಒಳಗಾದ ಯುವಕರು ಮತ್ತು ಅವರ ಪೋಷಕರಿಗೆ ಆಪ್ತ ಸಮಾಲೋಚನ ಕಾರ್ಯಕ್ರಮ ವನ್ನು ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ರವಿವಾರ ಆಯೋಜಿಸಲಾಗಿತ್ತು.

ಆಸ್ಪತ್ರೆಯ ನಿರ್ದೇಶಕ ಹಾಗೂ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಮತ್ತು ಡಾ.ವಿರೂಪಾಕ್ಷ ದೇವರಮನೆ, ದುಷ್ಚಟಗಳಾದ ಮದ್ಯಪಾನ, ಧೂಮ ಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಉಡುಪಿ ಬಸ್ ನಿಲ್ದಾಣದ ಬಳಿ, ಅಂಬಲಪಾಡಿಯ ದೇವಸ್ಥಾನದಲ್ಲಿ ಪ್ರತೀ ರವಿವಾರ ದುಷ್ಚಟಗಳಿಗೆ ಒಳಗಾದ ವ್ಯಕ್ತಿಗಳಿಗೆ ವ್ಯಸನಗಳಿಂದ ಹೊರ ಬರಲು ಉಚಿತವಾಗಿ ಆಪ್ತ ಸಮಾಲೋಚನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಪೊಲೀಸ್ ಇಲಾಖೆ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯನ್ನು ವ್ಯಸನ ಮುಕ್ತ ಜಿಲ್ಲೆಯ ನ್ನಾಗಿ ಪರಿವರ್ತಿಸಲು ಜಿಲ್ಲಾ ಎಸ್ಪಿಅಕ್ಷಯ್ ಹಾಕೆ ಮಚ್ಚೀಂದ್ರ ನೇತೃತ್ವದ ಪೊಲೀಸ್ ತಂಡ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಗಾರದಲ್ಲಿ ಉಡುಪಿ ಸೆನ್ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್, ಮಣಿಪಾಲ ಠಾಣೆಯ ನಿರೀಕ್ಷಕ ದೇವರಾಜ್ ಟಿ.ವಿ. ಸೇರಿದಂತೆ ಉಡುಪಿ, ಬ್ರಹ್ಮಾವರ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಬಾಳಿಗಾ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News