×
Ad

ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅರಿವು ಮೂಡಿಸಬೇಕಿದೆ: ಕರ್ನಲ್ ಶರತ್ ಭಂಡಾರಿ

Update: 2023-07-09 19:17 IST

ಮಂಗಳೂರು: ಪಠ್ಯ ಪುಸ್ತಕದಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಬೇಕು ಮತ್ತು ಇಂದಿನ ವಿದ್ಯಾರ್ಥಿಗಳಿಗೆ ಅದರ ವಿಚಾರಗಳನ್ನು ಬೋಧಿಸುವ ವ್ಯವಸ್ಥೆಯಾಗಬೇಕು. ಆವಾಗ ಮಾತ್ರ ದೇಶ ಪ್ರೇಮ ಮತ್ತು ದೇಶದ ರಕ್ಷಣೆ, ದೇಶದ ಬಗ್ಗೆ ಅಭಿಮಾನ ಮೂಡಲು ಸಾಧ್ಯ ಎಂದು ಹಿರಿಯ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅಭಿಪ್ರಾಯಪಟ್ಟರು.

ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ವತಿಯಿಂದ ನಗರದ ಚಿಲಿಂಬಿಯ ವಿನಯ್ ವಿಲ್ಲಾದಲ್ಲಿ ರವಿವಾರ ನಡೆದ ಲೇಖಕ ಅಕ್ಷಯ್ ಹೆಗಡೆ ಬರೆದಿ ರುವ ‘ಸಂಗ್ರಾಮ ಪೀಠಿಕೆ’ ಭಾರತ ಪಾಕಿಸ್ತಾನ ಯುದ್ಧದ ನೆನಪುಗಳ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ರಕ್ಷಣೆ, ಸೇನಾನಿಗಳ ಪರಿಚಯ ಮಾಡುವಂತಹ ಕೃತಿಗಳು ಮತ್ತಷ್ಟು ಹೊರಬರಬೇಕು. ಈ ಕೃತಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತಾ ಗಬೇಕು. ದೇಶದ ರಕ್ಷಣೆಯು ಸಂವಿಧಾನದ ಮೇಲೆ ನಿಂತಿವೆ. ಹಾಗಾಗಿ ಸಂವಿಧಾನದ ಬಗ್ಗೆ ಮಕ್ಕಳಿಗೆ ಪರಿಚಯಿಸಿಕೊಡಬೇಕಿದೆ ಎಂದು ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

ಮೆನ್‌ಶನ್ಸ್ ಇನ್ ಡಿಸ್‌ಪ್ಯಾಚ್ ಶೌರ್ಯ ಪ್ರಶಸ್ತಿ ವಿಜೇತ ಎಂಡಬ್ಲ್ಯೂಒ ಲಕ್ಷ್ಮಣ ಹರೇಕಳ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ಲಕ್ಷ್ಮಣ ಹರೇಕಳ ಅವರನ್ನು ಸನ್ಮಾನಿಸಲಾಯಿತು.

ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ಈ ಕೃತಿಯ ಆಧಾರದಲ್ಲಿ ಈಗಾಗಲೇ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಿಗೆ ಜಿಲ್ಲೆಯಿಂದ ಉತ್ತಮ ಸ್ಪಂದನೆ ಲಭಿಸಿವೆ. ಈಗಾಗಲೇ ವೇದಿಕೆಯ ವತಿಯಿಂದ ೭ ವರ್ಷದಲ್ಲಿ ಸುಮಾರು ೨೦ ಲಕ್ಷ ರೂ. ಮಿಕ್ಕಿದ ಸೈನಿಕ ಕಲ್ಯಾಣ ನಿಧಿಯನ್ನು ಅರ್ಹ ಸೈನಿಕ ಕುಟುಂಬಗಳಿಗೆ ನೀಡುವ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಹುಂಡಿ ಪ್ರಭಾ ಕಾಮತ್, ಬೆಂಗಳೂರಿನ ವಟಿ ಕುಟೀರ ಪ್ರಕಾಶನದ ಕಿರಣ ವಟಿ, ವೇದಿಕೆಯ ಶ್ರೀಕಾಂತ್ ಶೆಟ್ಟಿ, ಅಣ್ಣಪ್ಪದೇವಾಡಿಗ, ಹರೀಶ್ ಕೆ. ಬಂಗೇರಾ, ಗುರುಚಂದ್ರ ಹೆಗ್ಡೆ, ಸೈನಿಕರ ಸಂಘದ ಕ್ಯಾ.ದೀಪಕ್ ಅಡ್ಯಂತಾಯ ಉಪಸ್ಥಿತರಿದ್ದರು.

ಶಶಿಕಲಾ ಶೆಟ್ಟಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು. ಯಶ್‌ಪಾಲ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News