×
Ad

ಮಾತೃಭಾಷೆ ಕೊಂಕಣಿಯಾದ ಕಾರಣಕ್ಕೆ ಕಾಸರಗೋಡಿನ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣ ನಿರಾಕರಣೆ

Update: 2024-07-16 15:05 IST

ಮಂಗಳೂರು, ಜು. 16: ಕಾಸರಗೋಡಿನಲ್ಲಿ 1ರಿಂದ 10 ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಕಾಸರಗೋಡಿನ ವಿದ್ಯಾರ್ಥಿನಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಿಇಟಿ ಬರೆದು ಉತ್ತೀರ್ಣಳಾಗಿದ್ದರೂ ಸೀಟು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆನ್ನುವ ವಿಚಾರವನ್ನು ವಿಧಾನ ಪರಿಷತ್‌ನ ಕಸಾಪದ ಶೂನ್ಯ ವೇಳೆಯಲ್ಲಿ ಸದಸ್ಯರಾದ ಐವನ್ ಡಿಸೋಜಾ ಪ್ರಸ್ತಾಪಿಸಿದ್ದಾರೆ.

ಶಾಲಾ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿ ಎಂದು ದಾಖಲಾಗಿರುವ ಕಾರಣ ಆಕೆಗೆ ಪ್ರವೇಶ ನಿರಾಕರಿಸಲಾಗಿದೆ. ಹೈಯರ್ ಸೆಕೆಂಡರಿಯಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡವನ್ನೇ ಆಯ್ದುಕೊಂಡಿದ್ದಳು. ಹೈಯರ್ ಸೆಕೆಂಡರಿಯಲ್ಲಿ ಶೇ. 80 ಅಂಕಗಳನ್ನು ಪಡೆದು ಕರ್ನಾಟಕ ಸಿಇಟಿಯಲ್ಲಿ ಉತ್ತೀರ್ಣರಾಗಿ ಬಿಎಸ್ಸಿ (ನರ್ಸಿಂಗ್)ಗೆ ಅರ್ಹತೆ ಪಡೆದಿದ್ದರು.ಆದರೆ ಪ್ರಮಾಣ ಪತ್ರ ಪರಿಶೀಲನೆ ವೇಳೆ ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿ ಎಂದು ದಾಖಲಾಗಿರುವುದನ್ನು ಕಾರಣವಾಗಿಸಿ ಆಕೆಗೆ ಸೀಟು ನಿರಾಕರಿಸಲಾಗಿದೆ.

ಸಿಇಟಿ ಪರೀಕ್ಷೆಗೆ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿಯೂ ವಿದ್ಯಾರ್ಥಿನಿ ಉತ್ತೀರ್ಣರಾಗಿದ್ದಾರೆ. ಗಡಿನಾಡು ಕಾಸರಗೋಡಿನ ಕನ್ನಡ ವಿದ್ಯಾರ್ಥಿನಿ ಎಂಬ ಪ್ರಮಾಣ ಪತ್ರ ಸಲ್ಲಿಸಿದರೂ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ. ಕನ್ನಡ, ತುಳು, ಕೊಡವ ಅಥವಾ ಬ್ಯಾರಿ ಭಾಷೆಗಳು ಮಾತೃಭಾಷೆಯಾಗಿದ್ದರೆ ಮಾತ್ರವೇ ಕರ್ನಾಟಕದಲ್ಲಿ ಸೀಟು ಲಭಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಸಿಇಟಿ ಅರ್ಹತಾ ಮಾನದಂಡ- 2024ರಲ್ಲಿ ಮಾತೃಭಾಷೆ ಕನ್ನಡ, ತುಳು ಮತ್ತು ಕೊಡವ ಎಂದು ಮಾತ್ರ ನಮೂದಿಸಲಾಗಿದೆ. ಕ್ರೈಸ್ತರು ಕೊಂಕಣಿ ಭಾಷೆ ಮಾತನಾಡುವವರು. ಕಾಸರಗೋಡಿನ ಗಡಿನಾಡು ಪ್ರದೇಶದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಆದ್ದರಿಂದ ಕೊಂಕಣಿ ಭಾಷೆ ಸೇರಿಸಿ ಉನ್ನತ ಶಿಕ್ಷಣ ಸಚಿವರು ಆದೇಶ ಹೊರಡಿಸಬೇಕು ಎಂದು ಐವನ್ ಡಿಸೋಜಾರವರು ಶೂನ್ಯ ವೇಳೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News