×
Ad

ಕಾಸರಗೋಡು| ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಕ್ಕೆ ಕೇಂದ್ರ ಸಾರಿಗೆ ಸಚಿವಾಲಯ ತಡೆ

Update: 2026-02-03 21:33 IST

ಕಾಸರಗೋಡು: ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್  ಸಂಗ್ರಹಕ್ಕೆ ಕೇಂದ್ರ ಸಾರಿಗೆ ಸಚಿವಾಲಯ ತಡೆ ನೀಡಿದೆ. ಮುಂದಿನ 24 ಗಂಟೆಯೊಳಗೆ ಟೋಲ್ ಗೇಟ್ ಮುಚ್ಚಲಾಗುವುದು ಎಂದು ಭರವಸೆ ನೀಡಿದ್ದಾರೆ.

ಟೋಲ್  ಸಂಗ್ರಹಿಸುವ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೋರಾಟ ನಡೆದಿತ್ತು. ಹೋರಾಟ ಸಮಿತಿ ರಚಿಸಿ ಪ್ರತಿಭಟನೆ ಜೊತೆಗೆ ಕಾನೂನು ಹೋರಾಟವೂ ನಡೆದಿತ್ತು. ಶುಲ್ಕ ಸಂಗ್ರಹ ಸ್ಥಗಿತಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಒಂದು ಟೋಲ್ ಗೇಟ್ ನಿಂದ 60 ಕಿ. ಮೀ ಅಂತರ ಇರಬೇಕೆಂಬ ಕೇಂದ್ರ ಸಾರಿಗೆ ಸಚಿವಾಲಯದ ನಿರ್ದೇಶನ ಉಲ್ಲಂಘಿಸಿ ಕೇವಲ 23 ಕಿ.ಮೀ ದೂರದ ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿತ್ತು. ಇದರಿಂದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಬಿಜೆಪಿ ಹೊರತು ಉಳಿದ ಪಕ್ಷಗಳು, ಸಂಘಟನೆಗಳ ನೇತೃತ್ವದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸುತ್ತಾ ಬಂದಿತ್ತು.

ಹೋರಾಟವು ಹಿಂಸಾತ್ಮಕ ರೂಪು ಪಡೆದಿತ್ತು. ಟೋಲ್ ಗೇಟ್ ಮೇಲೆ ದಾಳಿ ನಡೆದು, ಕ್ಯಾಮರಾ, ಬ್ಯಾರಿಕೇಡ್, ಗಾಜುಗಳನ್ನು ಸೇರಿದಂತೆ ಹಲವು ರೀತಿಯ ನಷ್ಟಕ್ಕೂ ಕಾರಣವಾಗಿತ್ತು. ಶಾಸಕರು ಅಹೋ ರಾತ್ರಿ ಧರಣಿ ನಡೆಸಿದ್ದರು. ಪರಿಸ್ಥಿತಿ ದಿನ ಕಳೆದಂತೆ ವಿಕೋಪಕ್ಕೆ ತೆರಳುತ್ತಿತ್ತು. ಕೊನೆಗೂ ಪೊಲೀಸರು ಧರಣಿ ನಡೆಸುತ್ತಿದ್ದ ಚಪ್ಪರವನ್ನು ತೆರವುಗೊಳಿಸಿ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ಹೋರಾಟ ಸಮಿತಿ ಮುಖಂಡರನ್ನು ಬಂಧಿಸಿದ್ದರು. ಸಿಪಿಎಂ ಮುಖಂಡ ಸಿ.ಎ ಝುಬೈರ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು, ಅಶ್ರಫ್ ಕಾರ್ಲೆ ಮೊದಲಾದವರು ಹೋರಾಟದ ಮುಂಚೂಣಿಯಲ್ಲಿದ್ದರು.

ಟೋಲ್  ಸಂಗ್ರಹ ರದ್ದು ಪಡಿಸುವ ಕೇಂದ್ರ ಸಾರಿಗೆ ಸಚಿವಾಲಯದ ತೀರ್ಮಾನವನ್ನು ಹೋರಾಟ ಸಮಿತಿ ಕುಂಬಳೆ ಯಲ್ಲಿ ವಿಜಯೋತ್ಸವ ನಡೆಸಿತು. ಹೋರಾಟ ಸಮಿತಿ ಕಳೆದ ಎರಡು ತಿಂಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ಎ.ಕೆ.ಎಂ ಅಶ್ರಫ್ ಹಾಗೂ ಸಿ. ಎ ಝುಬೈರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದು, ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಅಭಿನಂದಿಸಿದ್ದಾರೆ. 







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News