ಕಾಸರಗೋಡು| ತಂದೆಯಿಂದ ಮಗಳ ಕೊಲೆ: ಆರೋಪಿ ಸೆರೆ
Update: 2026-02-02 19:47 IST
ಕಾಸರಗೋಡು: 18 ವರ್ಷದ ಮಗಳನ್ನು ತಂದೆಯೇ ಕಡಿದು ಕೊಲೆಗೈದಿದ್ದಾನೆ ಎನ್ನಲಾದ ದಾರುಣ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ.
ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ, ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡಾ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.
ವಿದೇಶದಲ್ಲಿದ್ದ ಉಮ್ಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದು, ಆಸ್ತಿಗಾಗಿ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.