ಕುಂಬಳೆ : ಜ.28ರಿಂದ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಉರೂಸ್
ಸನದುದಾನ, ಆಧ್ಯಾತ್ಮಿಕ ಸಮಾವೇಶದೊಂದಿಗೆ ಸಮಾರೋಪ
ಕಾಸರಗೋಡು, ಜ.27: ಮುಹಿಮ್ಮಾತ್ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಸಂಸ್ಥೆಯ ಪದವಿ ಪ್ರದಾನ ಸಮಾವೇಶವು ಈ ತಿಂಗಳ 28ರಿಂದ ಮುಹಿಮ್ಮಾತ್‌ನಲ್ಲಿ ನಡೆಯಲಿದೆ. 31ರಂದು ಶನಿವಾರ ಸಂಜೆ ನಡೆಯುವ ಸನದುದಾನ ಅಹ್ದಲಿಯಾ ಆಧ್ಯಾತ್ಮಿಕ ಸಮಾವೇಶದೊಂದಿಗೆ ಉರೂಸ್ ಸಮಾರೋಪಗೊಳ್ಳಲಿದೆ.
ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್, ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸೇರಿದಂತೆ ಅನೇಕ ಧಾರ್ಮಿಕ ನಾಯಕರು ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಝಿಯಾರತ್, ರ್ಯಾಲಿ, ದೌರತುಲ್ ಖುರ್ಆನ್, ತಮಿಳು ಪ್ರತಿನಿಧಿ ಸಮಾವೇಶ, ಸ್ವಲಾತ್ ಮಜ್ಲಿಸ್, ಮತಪ್ರವಚನ, ರಾತೀಬ್–ಮೌಲಿದ್ ಮಜ್ಲಿಸ್‌ಗಳು ಉರೂಸ್‌ನ ಭಾಗವಾಗಿ ನಡೆಯಲಿವೆ.
ಬುಧವಾರ ಮಧ್ಯಾಹ್ನ 2.30ಕ್ಕೆ ಇಚ್ಚಿಲಂಗೋಡು ಮಖಾಂ ಝಿಯಾರತ್‌ನೊಂದಿಗೆ ಉರೂಸ್‌ಗೆ ಅಧಿಕೃತ ಚಾಲನೆ ದೊರೆಯಲಿದೆ. ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ವಹಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಮುಗು ರೋಡ್‌ನಿಂದ ವಿಲಂಬರ ರ್ಯಾಲಿ ನಡೆಯಲಿದೆ. ನಂತರ ಪತಾಕೆ ಏರಿಕೆ ಮತ್ತು ಸಮೂಹ ಝಿಯಾರತ್ ನಡೆಯಲಿದೆ.
ಉದ್ಘಾಟನಾ ಸಮಾವೇಶವು ಸಂಜೆ 6.30ಕ್ಕೆ ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಉದ್ಘಾಟಿಸಲಿದ್ದಾರೆ.
ಶನಿವಾರ ಸಮಾರೋಪ ದಿನ ಬೆಳಿಗ್ಗೆ ಹಾಫಿಝ್‌ಗಳು ಹಾಗೂ ಹಿಮಮಿ ಪಂಡಿತರಿಗೆ ಸ್ಥಾನವಸ್ತ್ರ ವಿತರಿಸಲಾಗುವುದು. ಸಂಜೆ 6.30ಕ್ಕೆ ನಡೆಯುವ ಸನದುದಾನ ಅಹ್ದಲಿಯಾ ಆಧ್ಯಾತ್ಮಿಕ ಸಮಾವೇಶವನ್ನು ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸನದುದಾನ ನೆರವೇರಿಸಲಿದ್ದಾರೆ. ಈ ವರ್ಷ 68 ಹಿಮಮಿಗಳು ಮತ್ತು 11 ಹಾಫಿಝ್‌ಗಳು ಧಾರ್ಮಿಕ ಅಧ್ಯಯನ ಪೂರೈಸಿ ಸನದು ಸ್ವೀಕರಿಸಲಿದ್ದಾರೆ.
ಉತ್ತರ ಕೇರಳ ಹಾಗೂ ದಕ್ಷಿಣ ಕನ್ನಡದ ಪ್ರಮುಖ ಆಧ್ಯಾತ್ಮಿಕ ಉತ್ಸವಗಳಲ್ಲಿ ಒಂದಾದ ಮುಹಿಮ್ಮಾತ್ ಉರೂಸ್‌ಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಉರೂಸ್ ಯಶಸ್ವಿಗಾಗಿ 313 ಸದಸ್ಯರ ಸ್ವಯಂಸೇವಕರ ತಂಡವನ್ನು ನಿಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ತಿಳಿಸಿದೆ.