×
Ad

79ನೇ ಸ್ವಾತಂತ್ರ್ಯ ದಿನಾಚರಣೆ | ಧ್ವಜಾರೋಹಣ ನೆರವೇರಿಸಿದ ಸಚಿವ ಶಿವರಾಜ್ ತಂಗಡಗಿ

Update: 2025-08-15 14:25 IST

ಕೊಪ್ಪಳ : 79ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಧ್ವಜಾರೋಹಣ ನೆರವೇರಿಸಿದರು.

ದ್ವಜಾಹೋರಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಹೋರಾಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಪ್ಪನವರು, ಶಿವಮೂರ್ತಿಸ್ವಾಮಿ ಅಳವಂಡಿಯವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ.ಷರೀಫ್‌ ಅವರು, ಮಾಧವರಾವ್ ಅವರು, ಬಿ.ಕೆ.ಪ್ರಾಣೇಶಾಚಾರ್ಯರು, ಮುರಡಿ ಭೀಮಜ್ಜ ಮೊದಲಾದ ಧೀಮಂತರ ದೇಶ ಪ್ರೇಮದ ಗುಣವು ನಮಗೆಲ್ಲ ಸ್ಫೂರ್ತಿಯಾಗಿದ್ದು, ಅವರ ಸೇವಾಗುಣವನ್ನು ಇಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಂಗಡಗಿ ಹೇಳಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಜಾತಿ, ಧರ್ಮ, ಭೇದ-ಭಾವ ಮಾಡದೇ ಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳೋಣ. ದೇಶ ಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದು ಹೇಳಿದರು.

ರಾಜ್ಯ ಸರಕಾರದಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ, ಪಂಚ ಗ್ಯಾರಂಟಿ ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದವರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಸೇರಿದಂತೆ ಹಲವಾರು ಜನರಿಗೆ ಇವುಗಳ ಸೌಲಭ್ಯ ದೊರೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಜೀವನ ಮಟ್ಟವು ಸುಧಾರಣೆಯಾಗಿದ್ದು, ಜನ ಸೇವೆಯೇ ನಮ್ಮ ಸರಕಾರದ ಧ್ಯೇಯವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷದ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು, ಮತ್ತು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಪರಿಷತ್ ಸದಸ್ಯೆ ಹೇಮಲತಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತ, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ಧಿ, ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ಮತ್ತು ತಹಶೀಲ್ದಾರ್ ವಿಠ್ಠಲ್ ಚೌಗಲೆ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News