ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿಗರು ಕೇಂದ್ರ ಸರಕಾರದ ಬಳಿ ಪ್ರಸ್ತಾಪಿಸಲಿ: ಸಚಿವ ಶಿವರಾಜ್ ತಂಗಡಗಿ
ಗಂಗಾವತಿ: ಡಿ.2: ತುಂಗಾಭದ್ರ ನೀರಿನ ವಿಚಾರವಾಗಿ ಅನಗತ್ಯ ರಾಜಕೀಯ ಮಾಡುತ್ತಿರುವ ಬಿಜೆಪಿಗರು ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಬಳಿ ಧ್ವನಿ ಎತ್ತಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ, ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲ. ರೈತರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವುದೇ ಯೋಗ್ಯತೆ ಇಲ್ಲ. ಅಣೆಕಟ್ಟು ರಕ್ಷಣೆ ದೃಷ್ಟಿಯಿಂದ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಿ ಎಂದು ಹೇಳಿದವರು ಯಾರು? ರೈತರ ಪರ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತಲಿ. ಅವರು ಪ್ರಧಾನಿ ಮೋದಿ ಅವರ ಬಳಿ ಕುಣಿದರೆ ಸ್ವಲ್ಪ ಉಪಯೋಗವಾಗಲಿದೆ ಎಂದು ಹೇಳಿದರು.
ಡ್ಯಾಂನ ಗೇಟ್ ಅಳವಡಿಕೆ ಸಂಬಂಧ ನಮ್ಮ ರಾಜ್ಯದ ಪಾಲಿನ ಹಣ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ಕಡತ ಆರ್ಥಿಕ ಇಲಾಖೆಯಲ್ಲಿದೆ. ಶೀಘ್ರ ಹಣ ಬಿಡುಗಡೆಯಾಗಲಿದೆ. ಅಂಜನಾದ್ರಿ ಹನುಮಮಾಲಾ ವಿಸರ್ಜನೆಗೆ ಒಂದು ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಪ್ರತಿಯಿಂದು ಸ್ಥಳದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು,ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.