×
Ad

ಅಂಜನಾದ್ರಿ ಹನುಮಮಾಲಾ ವಿಸರ್ಜನೆ; ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಿ : ಸಚಿವ ತಂಗಡಗಿ‌ ಸೂಚನೆ

Update: 2025-11-17 17:03 IST

ಗಂಗಾವತಿ (ಕೊಪ್ಪಳ): ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಎರಡು ದಿನ ನಡೆಯಲಿರುವ ಹನುಮಮಾಲಾ‌ ವಿಸರ್ಜನೆಗೆ ಲಕ್ಷಾಂತರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮೂಲ ಸೌಲಭ್ಯ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಿನ ಕ್ರಮವಹಿಸುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಸೂಚಿಸಿದ್ದಾರೆ.

ಹನುಮಮಾಲಾ‌ ವಿಸರ್ಜನೆ ಹಿನ್ನೆಲೆಯಲ್ಲಿ ತಮ್ಮ‌ ನೇತೃತ್ವದಲ್ಲಿ ಗಂಗಾವತಿ ಮುನ್ಸಿಪಾಲಿಟಿ ಸಭಾಂಗಣದಲ್ಲಿ‌ ಸೋಮವಾರ ನಡೆದ ಸಭೆಯಲ್ಲಿ‌ ಮಾತನಾಡಿದ ಸಚಿವರು, ಡಿ.2, ಡಿ.3ರಂದು ನಡೆಯಲಿರುವ‌‌ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಭಕ್ತರು ಹನುಮಮಾಲೆ ಧರಿಸಿ ತಿಂಗಳವರೆಗೆ ಕಠಿಣ ವೃತ ಕೈಗೊಂಡು ಮಾಲೆಯ ವಿಸರ್ಜನೆಗಾಗಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಇಡೀ ಗಂಗಾವತಿಯಲ್ಲಿ ಪೊಲೀಸರು ಹದ್ದಿನ ಕಣ್ಣಿಡಬೇಕು.‌ ಅಂಜನಾದ್ರಿ ಸಂಪರ್ಕಿಸುವ ಕಾರಟಗಿ, ಕನಕಗಿರಿ, ಕೊಪ್ಪಳ, ಹೊಸಪೇಟೆ ರಸ್ತೆ ಸೇರಿದಂತೆ ಹಲವೆಡೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಬೇಕು. ಇಡೀ ತಾಲ್ಲೂಕಿನಲ್ಲಿ‌ ಪೊಲೀಸರು‌ ನಿರಂತರವಾಗಿ ಗಸ್ತು ತಿರುಗಬೇಕು. ಅನುಮಾನಾಸ್ಪದ‌ ವ್ಯಕ್ತಿಗಳು ಕಂಡು ಬಂದರೆ ಮುಲಾಜಿಲ್ಲದೆ, ವಶಕ್ಕೆ ಪಡೆಯಿರಿ ಎಂದು ತಾಕೀತು ಮಾಡಿದರು.

ಅಂಜನಾದ್ರಿ ಆಂಜನೇಯ ಯಾರ ಒಬ್ಬರ ಸ್ವತ್ತಲ್ಲ. ನಮ್ಮೆಲ್ಲರ ಸ್ವತ್ತು, ಇಡೀ ಜಿಲ್ಲೆಗೆ ಸಂಬಂಧಿಸಿದ್ದು ಅಂಜನಾದ್ರಿ ಬೆಟ್ಟ.‌ ಕಳೆದ‌ ಎರಡು ವರ್ಷ ಅಚ್ಚುಕಟ್ಟಾಗಿ ಹುನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆದಿದೆ. ಇದಕ್ಕಿಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಬೇಕು.‌ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು‌.

ವಾಹನ ಪಾರ್ಕಿಂಗ್ ನಿರ್ವಹಣಾ ಸಮಿತಿ, ಆಹಾರ ಪರಿಶೀಲನಾ ಸಮಿತಿ, ವಿದ್ಯುತ್ ಅಲಂಕಾರ, ಸಹಾಯವಾಣಿ, ರಸ್ತೆ ನಿರ್ಮಾಣ, ಅರಣ್ಯ ಸಮಿತಿ ಸೇರಿದಂತೆ ಈಗಾಗಲೇ 20 ಸಮಿತಿಗಳನ್ನು ರಚಿಸಲಾಗಿದ್ದು, ಒಂದು ಸುತ್ತಿನ ಸಭೆಯನ್ನು ಕೂಡ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ‌‌ ಸುರೇಶ್ ಇಟ್ನಾಳ‌ ಅವರು ಇದೇ ವೇಳೆ ಸಚಿವರ ಗಮನಕ್ಕೆ ತಂದರು.‌

ಆಹಾರ ಸಿದ್ಧಪಡಿಸುವ ಸ್ಥಳದಲ್ಲಿ ಸಿಸಿ‌ ಕ್ಯಾಮೆರಾ :

ಆಹಾರ ಮತ್ತು ಪ್ರಸಾದ ಸಿದ್ಧಪಡಿಸುವ ಸಮಿತಿ ಸೇರಿದಂತೆ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಿಸಿ ಕ್ಯಾಮೆರಾ ನಿರ್ವಹಣೆಗೆ ಒಂದು ತಂಡವನ್ನೇ ನಿಯೋಜಿಸಿ. ಇನ್ನು ಭಕ್ತರು ಬೆಟ್ಟ ಹತ್ತುವಾಗ ಮಾರ್ಗ ಮಧ್ಯೆ ಕೂಡ ವೈದ್ಯರ ತಂಡ ಸರ್ವ ಸನ್ನದ್ಧರಿರಬೇಕು. ಯಾರಿಗಾದರೂ ಅರೋಗ್ಯದಲ್ಲಿ ತೊಂದರೆ ಆದರೆ ಅಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ‌ರು ಸೂಚಿಸಿದರು.

ಅಲ್ಲಲ್ಲಿ‌ ಮೊಬೈಲ್ ಶೌಚಾಲಯ:

ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಶುಚಿತ್ವ ಕಾಪಾಡಬೇಕು. ಮೆಟ್ಟಿಲುಗಳನ್ನು‌ ಹತ್ತುವ ವೇಳೆ ಅಥವಾ ಬೆಟ್ಟದ ಮೇಲ್ಭಾಗದಲ್ಲಿ ತಂಬಾಕು ಉಗುಳಬಾರದು. ಇನ್ನು ಸ್ನಾನಘಟ್ಟ ಬಳಿ ಸ್ಥಾನ ಮಾಡಿದ ಬಳಿಕ ಅಲ್ಲಿಯೇ ಬಟ್ಟೆ, ಸಾಬೂನು ಇನ್ನಿತರ ವಸ್ತುಗಳನ್ನು ಎಸೆಯಬಾರದು, ನದಿಯ ಸ್ವಚ್ಛತೆ ಕಾಪಾಡಬೇಕು ಎಂದು ಸಚಿವರು ಭಕ್ತಾದಿಗಳಲ್ಲಿ ವಿನಂತಿ ಮಾಡಿದರು.

ಸಿಇಒ‌ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎರಡು-ಮೂರು ದಿನ ಸ್ಥಳದಲ್ಲಿಯೇ ಮೊಕ್ಕಾಂ ಹೂಡಬೇಕು. ಇನ್ನು ಜಿಲ್ಲೆಯ ಏಳು ತಹಶೀಲ್ದಾರ್ ಗಳು ಪೂರ್ವ ಸಿದ್ಧತೆಯಿಂದ ಹಿಡಿದು ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಗಂಗಾವತಿಯಲ್ಲಿಯೇ ಇದ್ದು, ಕೆಲಸ ಮಾಡಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ‌ ನೀಡಿದರು.

ಅಂಜನಾದ್ರಿಗೆ ಆಗಮಿಸುವ ಭಕ್ತಾದಿಗಳನ್ನು ಕರೆ ತರುವ ಖಾಸಗಿ ಸಾರಿಗೆ ಹಾಗೂ ಖಾಸಗಿ‌ ವಾಹನಗಳನ್ನು ಸ್ವಲ್ಪ ಹಿಂದೆಯೇ ನಿಲ್ಲಿಸಿ, ಅಲ್ಲಿಂದ ಸರ್ಕಾರಿ ಮಿನಿ ಬಸ್ ಗಳಲ್ಲಿ‌ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿ. ಇದರಿಂದ ಅನಗತ್ಯ ವಾಹನದಟ್ಟಣೆ ತಡೆಗಟ್ಟಬಹುದು ಎಂದು‌ ಸಚಿವರು ಸಲಹೆ ನೀಡಿದರು.

ಸಭೆಯಲ್ಲಿ ಸಂಸದ‌ ರಾಜಶೇಖರ್‌ ಹಿಟ್ನಾಳ್, ಸ್ಥಳೀಯ ಶಾಸಕ ಜನಾರ್ದನ್ ರೆಡ್ಡಿ, ನಗರಸಭೆ ಅಧ್ಯಕ್ಷೆ ಹೀರಾ ನಾಗರಾಜ್ ಸಿಂಗ್,‌ ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಳ್, ಸಿಇಓ ವರ್ಣಿತ್ ನೇಗಿ‌ ಹಾಗೂ ಇನ್ನಿತರ ಅಧಿಕಾರಿಗಳು‌ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News