ಮಾತು ತಪ್ಪಿದ ಸಿದ್ದರಾಮಯ್ಯನವರೇ, ಈಗಲಾದರೂ ನುಡಿದಂತೆ ನಡೆಯಿರಿ: ಶರಣು ಪಾಟೀಲ್
ಕೊಪ್ಪಳ: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಮೂರು ದಿನಗಳ ಅಹೋರಾತ್ರಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎ ಐ ಡಿ ವೈ ಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಜನರ ಪರ, ನುಡಿದಂತೆ ನಡೆಯುತ್ತೇವೆ, ಸಂವಿಧಾನವನ್ನು ಪಾಲಿಸುತ್ತೇವೆ, ದಮನಿತರ ಹಕ್ಕುಗಳ ರಕ್ಷಣೆ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ವಾಸ್ತವದಲ್ಲಿ ಈ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದರು.
ಆಶಾ ಕಾರ್ಯಕರ್ತೆಯರ ಭರವಸೆ ಈಡೇರಿಸುವುದಾಗಿ ಸ್ವತಃ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಭರವಸೆ ನೀಡಿದ್ದನ್ನು ಅವರೇ ಮರೆತಿದ್ದಾರೆ. ಮಹಿಳೆಯರು ಕೇಳುತ್ತಿರುವ ಕನಿಷ್ಠ ಸಂಬಳವನ್ನು ಕೊಡಲು ಸರ್ಕಾರ ತೋರುತ್ತಿರುವ ಧೋರಣೆ ಆಶಾ ಕಾರ್ಯಕರ್ತೆಯರಿಗೆ ಮಾಡುತ್ತಿರುವ ದ್ರೋಹವಾಗಿದೆ. ಕಷ್ಟಪಟ್ಟು ಹಗಲು-ರಾತ್ರಿ ದುಡಿಯುವ ಆಶಾ ಕಾರ್ಯಕರ್ತೆಯರು ಶಿಶು ಮರಣ, ಬಾಣಂತಿಯರ ಮರಣ, ಟಿಬಿ ಇನ್ನಿತರ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಇಂತಹ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತೆಯರು ರಾಜ್ಯ ಸರ್ಕಾರದಿಂದ ಕೇಳುತ್ತಿರುವುದು ಕೇವಲ ಹತ್ತು ಸಾವಿರ ಮಾತ್ರ. ಇಷ್ಟನ್ನು ಕೊಡದಿದ್ದರೆ ಇಂತಹ ಸರ್ಕಾರಗಳ ಪ್ರಯೋಜನವಾದರೂ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಆಶಾ ಕಾರ್ಯಕರ್ತೆಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಆದೇಶವನ್ನು ಹೊರಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಯುವಜನರನ್ನು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಧುಮುಕುವಂತೆ ಮಾಡುತ್ತೇವೆ ಎಂದರು.