ಕೋಮುವಾದಿ ಪಕ್ಷದಿಂದ ಸಮಾಜ ಒಡೆಯುವ ಕೆಲಸ : ಸಚಿವ ಶಿವರಾಜ ತಂಗಡಗಿ
ʼʼರಾಜ್ಯದಲ್ಲಿ ಶೇ.75ರಷ್ಟು ಸಮೀಕ್ಷೆ ಕಾರ್ಯ ಪೂರ್ಣʼʼ
ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ : ಕೋಮುವಾದಿ ಬಿಜೆಪಿ ಪಕ್ಷ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಕೊಪ್ಪಳದಲ್ಲಿ ಮಾತನಾಡಿದ ಅವರು, ನಮ್ಮ ನಾಯಕರಾದ ಸಿದ್ದರಾಮಯ್ಯನವರ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಿಂದುಳಿದವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ಸರಕಾರದಿಂದ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ಕೆಲ ಶ್ರೀಮಂತರು ಮತ್ತು ಬಲಾಢ್ಯರ ವಿರೋಧವಿದೆ. ಬಡವರಿಂದ ಈ ಸಮೀಕ್ಷೆ ಕಾರ್ಯಕ್ಕೆ ಯಾವುದೇ ವಿರೋಧ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ತುಳಿತಕ್ಕೆ ಒಳಗಾದ, ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಯೋಜನೆಗಳು ತಲುಪಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯರ ಆಶಯ. ಆದರೆ, ನಾವು ಯಾವುದೇ ಷಡ್ಯಂತ್ರಕ್ಕೆ ಬಗ್ಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಶೇ.75ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಅದರಲ್ಲೂ ನನ್ನ ಉಸ್ತುವಾರಿ ಜಿಲ್ಲೆಯಾದ ಕೊಪ್ಪಳದಲ್ಲಿ ಶೇ.98ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಬಿಜೆಪಿಯವರ ಕೊಡುಗೆ ಶೂನ್ಯ :
ಬಿಜೆಪಿಯವರು ಈ ದೇಶ ಮತ್ತು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಮಾತಿನಿಂದಲೇ ಮನೆ ಕಟ್ಟುವ ಕೆಲಸ ಮಾಡುತ್ತಾರೆ ಅಷ್ಟೇ. ಗ್ಯಾರೆಂಟಿಗಳಿಂದ ಬೊಕ್ಕಸ ಖಾಲಿಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸುಳ್ಳು ಆರೋಪ ಮಾಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿಂದು 2 ಸಾವಿರ ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೊಕ್ಕಸ ಖಾಲಿಯಾಗಿದ್ದರೆ, ಇಷ್ಟು ದೊಡ್ಡ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.