ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ : ಶಾಸಕ ಇಕ್ಬಾಲ್ ಹುಸೇನ್
ಕೊಪ್ಪಳ : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗ್ತಾರೆ. ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ಹೇಳಿದರು.
ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ. ಇದನ್ನು ಬಿಡಿಸಿ ಹೇಳುವ ಅಗತ್ಯ ಇಲ್ಲ. ಇದರ ಕುರಿತು ಹೈಕಮಾಂಡ್‌ನ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ್ ಗಾಂಧಿ ಸೇರಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇದು ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ಅಭಿಲಾಶೆಯನ್ನು ಹೇಳಿದ್ದೇನೆ. ನಾನು ಇದಕ್ಕೆ ಬದ್ಧನಾಗಿರುತ್ತೇನೆ ಎಂದರು.
ಬಿಗ್ ಬಾಸ್ ಮನೆಯ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಅವರು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅವರಿಗೆ ಕಾಲಾವಕಾಶ ನೀಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸ್ಥಳವನ್ನು ಸ್ವಚ್ಛವಾಗಿ ಇಡಲಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರು ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ ಎನ್ನುವ ಜೆಡಿಎಸ್‌ನ ಆರೋಪಕ್ಕೆ ಪ್ರತಿಕ್ರೀಯಿಸಿದ ಅವರು, ಅವರಿಗೆ ಮಾಡಲು ಬೇರೆ ಕೆಲಸವೇ ಇಲ್ಲ. ನಮ್ಮ ಮೇಲೆ ಕೆಸರು ಎಸೆದು ಅಪಪ್ರಚಾರ ಮಾಡುವುದರಲ್ಲೇ ತೊಡಗಿದ್ದಾರೆ. ಅಧಿಕಾರದಲ್ಲಿದ್ದಾಗ ಕೆಲಸ ಮಾಡದವರು, ನಾವು ಕೆಲಸ ಮಾಡಿದಾಗ ಟೀಕೆ ಮಾಡುತ್ತಾರೆ,” ಎಂದು ಹೇಳಿದರು.