×
Ad

ಗಂಗಾವತಿ | ಅಂತರ್ಜಾತಿ ವಿವಾಹ : ದಲಿತ ಯುವತಿಗೆ ವಿಷವುಣಿಸಿ ಕೊಲೆ ; ಆರೋಪ

Update: 2024-09-03 12:32 IST

ಮರಿಯಮ್ಮ/ಹನುಮಯ್ಯ

ಕೊಪ್ಪಳ/ಗಂಗಾವತಿ : ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವತಿಯನ್ನು, ಯುವಕನ ಮನೆಯವರು ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂದು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತ ಯುವತಿಯು ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ(21) ಎಂದು ತಿಳಿದುಬಂದಿದೆ.

ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮರಿಯಮ್ಮ ಹಾಗೂ ಹನುಮಯ್ಯ ಇಬ್ಬರು ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಹನುಮಯ್ಯ ಎಸ್‌ಟಿ ಸಮುದಾಯಕ್ಕೆ ಸೇರಿದ ಯುವಕ. ಮರಿಯಮ್ಮ ಹಾಗೂ ಹನುಮಯ್ಯ 2023ರ ಎಪ್ರಿಲ್‌ನಲ್ಲಿ ತಮ್ಮ ಕುಟುಂಬದವರನ್ನು ಒಪ್ಪಿಸಿ, ಬಳಿಕ ಗಂಗಾವತಿಯಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ಯುವಕನ ಮನೆಯಲ್ಲಿ ಜಾತಿ ಸಂಬಂಧ ಯುವತಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿವೆ.

ಯುವತಿಗೆ ಯುವಕನ ಕುಟುಂಬದವರು ಹಲ್ಲೆ ನಡೆಸಿದ್ದು, ಈ ವೇಳೆ ಯುವತಿಯ ಸಾವಾಗಿದೆ. ಯಾವುದೇ ಅನುಮಾನ ಬರ ಬಾರದೆಂದು ವಿಷವುಣಿಸಿದ್ದಾರೆ ಎಂದು ಯುವತಿಯ ತಂದೆ ಗಾಳೆಪ್ಪ ಆರೋಪಿಸಿದ್ದಾರೆ.

ನಂತರ ಕುಟುಂಬದವರು ಯುವತಿಯ ಕುಟುಂಬಕ್ಕೆ ಕರೆ ಮಾಡಿ, ‘ನಿಮ್ಮ ಮಗಳು ಜಮೀನಿನಲ್ಲಿ ವಿಷ ಕುಡಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಆಕೆ ಮೃತಪಟ್ಟಿದ್ದಾಳೆ’ ಎಂದು ತಿಳಿಸಿರುವುದಾಗಿ ಯುವತಿಯ ತಂದೆ ಗಂಗಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಿಠಲಾಪುರ ಗ್ರಾಮಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿದ್ದು, ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಯುವಕನ ಕುಟುಂಬದ 13 ಮಂದಿಯ ಮೇಲೆ ಯುವತಿಯ ತಂದೆ ಕೊಲೆ ಆರೋಪ ಹೊರಿಸಿದ್ದರಿಂದ ಇಬ್ಬರನ್ನು ವಿಚಾರಣೆಗಾಗಿ ಪೋಲಿಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News