×
Ad

ಗಂಗಾವತಿ | ಸರಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಅಕ್ರಮ ಸಾಗಾಣಿಕೆಗೆ ಯತ್ನ: ಮೂವರ ವಿರುದ್ಧ ಪ್ರಕರಣ ದಾಖಲು

Update: 2025-08-28 11:57 IST

ಗಂಗಾವತಿ: ಕನಕಗಿರಿ ರಸ್ತೆ ಬಳಿ ಇರುವ ಸರಕಾರಿ ಗೋದಾಮಿನಲ್ಲಿನ ಪಡಿತರ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಲ್ಲಿ ತುಂಬಿ, ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಗಂಗಾವತಿ ತಾಲೂಕು ಗ್ಯಾರಂಟಿ ಸಮಿತಿಯ ಸದ್ಯಸ್ಯರು ಮತ್ತು ಅಧಿಕಾರಿಗಳು ಪರಿಶೀಲಿಸಿದಾಗ ಸರಕಾರಿ ಗೋದಾಮಿನಿಂದ ಪಡಿತರವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಈ ಕುರಿತು ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ್ ಸುಹಾಸ್ ಯರೇಶೀಮಿ ಅವರು ನಗರದ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಗೋದಾಮು ವ್ಯವಸ್ಥಾಪಕ ಸೋಮಶೇಖರ ಬುಡ್ಡನವರ, ರೈಸ್‌ಮಿಲ್ ಮಾಲಕ ವಿದ್ಯಾನಗರದ ಉಮಾಶಂಕರ, ಲಾರಿ ಮಾಲಕ ಮತ್ತು ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ ಅವರನ್ನು ಸೇವೆಯಿಂದ ಅಮಾನತು ಮಾಡಲು ಸರಕಾರ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ನಗರದ ವಿದ್ಯಾನಗರದ ಗೌರಿಶಂಕರ ರೈಸ್‌ ಮಿಲ್‌ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 168 ಕ್ವಿಂಟಲ್ ಅಕ್ಕಿಯನ್ನು 2022ರಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು, ಸರಕಾರಿ ಗೋದಾಮಿನಲ್ಲಿಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆದರೆ, ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿ, ‘ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸದೆ, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾದ ಮಂಡಿಸಿದ್ದರು. ಇದೇ ವರ್ಷ ಜಿಲ್ಲಾಧಿಕಾರಿಗಳು ಆರೋಪಿಗಳಿಗೆ ಅಕ್ಕಿ ವಾಪಸ್ ನೀಡುವಂತೆ ಆದೇಶಿಸಿದ್ದರು.

ಜಪ್ತಿ ಮಾಡಿದ್ದ 168 ಕ್ವಿಂಟಲ್ ಅಕ್ಕಿಯನ್ನು ರೈಸ್‌ ಮಿಲ್‌ ನವರು ಮರಳಿ ಪಡೆದುಕೊಳ್ಳುವಾಗ ಗೋದಾಮು ವ್ಯವಸ್ಥಾಪಕ ಹಾಗೂ ಇತರರು ಸೇರಿ 275ಕ್ಕೂ ಹೆಚ್ಚು ಕ್ವಿಂಟಲ್‌ ನಷ್ಟು ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲು ಸಹಕರಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಸುಮಾರು 9.10 ಲಕ್ಷ ರೂ ಮೌಲ್ಯದ ಪಡಿತರ ಅಕ್ಕಿ ಮತ್ತು, ಲಾರಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ ಎMದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News