ಗಂಗಾವತಿ | ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ ಪ್ರಕರಣ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಗಂಗಾವತಿ(ಕೊಪ್ಪಳ): ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೆ.ವೆಂಕಟೇಶ ಕೊಲೆ ಪ್ರಕರಣದ ಆರೋಪಿಗಳನ್ನು ಗುರುವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.
ಭೀಮ್ ಅಲಿಯಾಸ್ ಭರತ್, ಸಲೀಂ, ವಿಜಯ್ ಹಾಗೂ ಧನರಾಜ್ ಬಂಧಿತ ಆರೋಪಿಗಲಾಗಿದ್ದು, ಇದಕ್ಕೂ ಮುನ್ನ ಕೃತ್ಯ ನಡೆದ ಸ್ಥಳ ರಿಲಯನ್ಸ್ ಪಾಯಿಂಟ್‌ನ ಲೀಲಾವತಿ ಆಸ್ಪತ್ರೆಯ ಬಳಿ ಆರೋಪಿಗಳನ್ನು ಕರೆತಂದು ಪೊಲೀಸರು ಸ್ಥಳ ಮಹಜರು ನಡೆಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಕೆಲವು ಸೂಚನೆಗಳನ್ನು ನೀಡಿದ್ದು ,ವಿಚಾರಣೆ ಬಾಕಿ ಇದ್ದಲ್ಲಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ವಿಚಾರಣೆ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು, ದೋಷಾರೋಪ ಪಟ್ಟಿ ಸಲ್ಲಿಕೆಯಾಗುವವರೆಗೂ ಪ್ರತಿ ಎರಡು ವಾರಕ್ಕೊಮ್ಮೆ ನ್ಯಾಯಾಲಯದೆದುರು ಹಾಜರುಪಡಿಸಬೇಕು. ಈ ಮಧ್ಯೆ ಹೆಚ್ಚುವರಿ ವಿಚಾರಣೆ, ಕೃತ್ಯದಲ್ಲಿ ಭಾಗಿಯಾಗದ ಇತರ ಆರೋಪಿಗಳ ಸೆರೆಗೆ ಈ ಆರೋಪಿಗಳ ನೆರವು ಬೇಕಾದಲ್ಲಿ ವಿಚಾರಣಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಬೇಕು ಎನ್ನುವ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಆರೋಪಿಗಳನ್ನು ಕೊಪ್ಪಳದ ಕಾರಾಗೃಹದಲ್ಲಿ ಇರಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ವೆಂಕಟೇಶ ತಡರಾತ್ರಿ ಊಟ ಮುಗಿಸಿ ತೆರಳುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪೊಂದು, ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ವೆಂಕಟೇಶನನ್ನು ಕೆಳಗೆ ಬೀಳಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು.