×
Ad

ಕೊಪ್ಪಳ | ಮುಳ್ಳುಕಂಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

Update: 2025-12-30 22:57 IST

ಸಾಂದರ್ಭಿಕ ಚಿತ್ರ

ಕೊಪ್ಪಳ: ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟಿಯಲ್ಲಿ ಮಂಗಳವಾರ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರ ಸಮಯಪ್ರಜ್ಞೆ ಹಾಗೂ ಕಾಳಜಿಯಿಂದ ಶಿಶುವಿನ ಪ್ರಾಣ ಉಳಿದಿದೆ.

ಮುಳ್ಳುಕಂಟಿಯಿಂದ ಶಿಶು ಅಳುವ ಸದ್ದು ಕೇಳಿಬಂದಾಗ ಅಲ್ಲಿದ್ದ ಸಾರ್ವಜನಿಕರು ಹೋಂಗಾರ್ಡ್ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಮಕ್ಕಳ ಸಹಾಯವಾಣಿ (ಚೈಲ್ಡ್‌ಲೈನ್)ಗೆ ಮಾಹಿತಿ ನೀಡಲಾಗಿದ್ದು, ಶಿಶುವನ್ನು ಸುರಕ್ಷಿತವಾಗಿ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶಿಶುವನ್ನು ಜಿಲ್ಲಾಕೇಂದ್ರದಲ್ಲಿರುವ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ, ಇಷ್ಟೊಂದು ಜನಸಂದಣಿಯ ನಡುವೆಯೂ ಪೋಷಕರು ಶಿಶುವನ್ನು ಮುಳ್ಳುಕಂಟಿಯಲ್ಲಿ ಬಿಟ್ಟು ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿಶುವಿಗೆ ಜನಿಸಿದ ಕೆಲವೇ ಗಂಟೆಗಳಾಗಿದ್ದು, ಕರಳುಬಳ್ಳಿ ಸಹ ಶಿಶುವಿನೊಂದಿಗೆ ಇದ್ದುದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರು ಶಿಶುವನ್ನು ಎತ್ತಿಕೊಂಡು ಸಮಾಧಾನಪಡಿಸಲು ಪ್ರಯತ್ನಿಸಿದ್ದು, ಅಮ್ಮನ ಎದೆಹಾಲು ಇಲ್ಲದೆ ಹಸಿವಿನಿಂದ ಮಗು ಒದ್ದಾಡುತ್ತಿರುವುದು ಕಂಡುಬಂದಿದೆ. ಶಿಶುವಿನ ತೂಕ ಸುಮಾರು 2.4 ಕಿಲೋಗ್ರಾಂ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೋಂಗಾರ್ಡ್ ಸಿಬ್ಬಂದಿಗಳಾದ ಶಿವಕುಮಾರ್ ಹಾಗೂ ಮಾರುತಿ ಅವರ ಸಮಯಪ್ರಜ್ಞೆಯಿಂದ ಶಿಶುವಿನ ಪ್ರಾಣ ಉಳಿದಿದೆ. ಮುಳ್ಳುಕಂಟಿಯಲ್ಲಿ ಬಿದ್ದಿದ್ದರಿಂದ ಶಿಶುವಿಗೆ ಹುಳುಗಳು ಕಚ್ಚಿ ನಂಜಾಗಿರುವ ಸಾಧ್ಯತೆ ಇದ್ದು, ತಜ್ಞ ವೈದ್ಯರು ಶಿಶುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News