ತೊಗರಿಗೆ ಬೆಂಬಲ ಬೆಲೆ ನೀಡದಿದ್ದರೆ ಕೊಪ್ಪಳ ಬಂದ್ : ಕರ್ನಾಟಕ ರೈತ ಸಂಘ ಎಚ್ಚರಿಕೆ
ಕನಕಗಿರಿ: ತೊಗರಿಗೆ ರಾಜ್ಯ ಸರಕಾರದಿಂದ ಹೆಚ್ಚು ವರಿಯಾಗಿ 500ರೂ. ಬೆಂಬಲ ಬೆಲೆ ನೀಡಬೇಕು. ಇಲ್ಲವಾದರೆ ಕೊಪ್ಪಳ ಜಿಲ್ಲಾ ಬಂದ್ ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ್ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಂಪಣ್ಣ ನಾಯಕ್, ಕೇಂದ್ರ ಸರಕಾರ ನಿಗದಿ ಮಾಡಿರುವ ಪ್ರತಿ ಕ್ವಿಂಟಾಲ್ ಗೆ 8 ಸಾವಿರ ರೂ.ನಂತೆ ತೊಗರಿ ಖರೀದಿ ಮಾಡುವ ರಾಜ್ಯ ಸರಕಾರದ ಕ್ರಮ ಖಂಡನೀಯ. ಕೂಡಲೇ ಸರಕಾರ ಕೇಂದ್ರದ 8 ಸಾವಿರ ರೂ.ಗೆ ಕನಿಷ್ಠ 500 ರೂ.ಸೇರಿಸಿ ಪ್ರತಿ ಕ್ವಿಂಟಾಲ್ ಗೆ 8500 ರೂ.ಯಂತೆ ತೊಗರಿ ಖರೀದಿ ಮಾಡಬೇಕು. ಈ ಬಗ್ಗೆ ಈಗಾಗಲೇ ಕನಕಗಿರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸರಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ರೈತರಿಗೆ ಮಾಡಿದ ಅನ್ಯಾಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ತೊಗರಿ ಬೆಳೆಯಲಾಗಿದೆ. ರಾಜ್ಯ ಸರಕಾರ 500ರೂ. ಪ್ರೋತ್ಸಾಹ ಧನ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು. ಕಳೆದ ವರ್ಷ ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ ಗೆ 7550 ರೂ.ನೀಡಿತ್ತು. ರಾಜ್ಯ ಸರಕಾರ ತನ್ನ ಪಾಲಿನ 450 ರೂ.ನೀಡಿತ್ತು. ಕಳೆದ ವರ್ಷದಂತೆ ಈ ಬಾರಿ ಕೇಂದ್ರದ ಸರಕಾರದ 800 ಸಾವಿರ ರೂ.ಬೆಂಬಲ ಬೆಲೆಗೆ 500 ರೂ.ಸೇರಿಸಿ, ತೊಗರಿ ಖರೀದಿ ಮಾಡಬೇಕು. ಸರಕಾರ ಜನವರಿ 20ರ ಒಳಗೆ ನಿರ್ಧಾರ ಕೈಗೊಳ್ಳದಿದ್ದರೆ ಕೊಪ್ಪಳ ಬಂದ್, ಕಲ್ಯಾಣ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು. ಜೊತೆಗೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲೇ ಬಂದರೂ ಕಪ್ಪುಬಟ್ಟೆ ಪ್ರದರ್ಶಿಸಲಾಗುವುದು ಎಂದು ಪಂಪಣ್ಣ ನಾಯಕ ಎಚ್ಚರಿಸಿದ್ದಾರೆ.