ಕೊಪ್ಪಳ | ಬಸ್ -ಟ್ರ್ಯಾಕ್ಟರ್ ಢಿಕ್ಕಿ : ಓರ್ವ ಮೃತ್ಯು, 15 ಮಂದಿಗೆ ಗಂಭೀರ ಗಾಯ
ಕೊಪ್ಪಳ: ಟ್ರ್ಯಾಕ್ಟರ್ ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು, 15 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ಮತ್ತು ವಿಆರ್‌ಎಲ್ ಬಸ್ ನಡುವೆ ಢಿಕ್ಕಿಯಾಗಿದೆ ಎನ್ನಲಾಗಿದೆ.
ಟ್ರ್ಯಾಕ್ಟರ್ ಚಾಲಕ ಕೆಂಚಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಟ್ರ್ಯಾಕ್ಟರ್ ನಲ್ಲಿದ್ದ ಸುಮಾರು15 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮುನಿರಾಬಾದ್ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹರಪನಹಳ್ಳಿ ತಾಲೂಕು ಹೊನ್ನೆನಹಳ್ಳಿಯಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ಟ್ರಾಕ್ಟರ್‌ನಲ್ಲಿ ಭಕ್ತರು ಹೊರಟಿದ್ದರು. ಬೆಂಗಳೂರಿನಿಂದ ಅಫಜಲಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಟ್ರಾಕ್ಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಟ್ರಾಕ್ಟರ್‌ನಲ್ಲಿ 20ಕ್ಕೂ ಹೆಚ್ಚು ಜನರಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.