ಕೊಪ್ಪಳ: ಸಾಲಬಾಧೆ, ಮೆಕ್ಕೆಜೋಳ ಬೆಳೆ ಹಾನಿ; ರೈತ ಆತ್ಮಹತ್ಯೆ
Update: 2025-07-31 10:45 IST
ಕೊಪ್ಪಳ/ಕುಕನೂರು : ಸಾಲಬಾಧೆ ಮತ್ತು ಸಕಾಲಕ್ಕೆ ಮಳೆಯಾಗದೆ ಮೆಕ್ಕೆಜೋಳ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ತಾಲೂಕಿನ ಅರಕೇರಿ ಗ್ರಾಮದ ರೈತರೊಬ್ಬರು ತನ್ನ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅರಕೇರಿ ಗ್ರಾಮದ ದೇವಪ್ಪ ನೀರಳ್ಳಿ (51) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಹತ್ತಿರದ ಶಿರೂರು ಕೆನರಾ ಬ್ಯಾಂಕ್ ನಲ್ಲಿ 2.5 ಲಕ್ಷ ಮತ್ತು ಇತರ ಕಡೆ ಗುಂಪು ಸಾಲವಾಗಿ ಸುಮಾರು ಒಂದು ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಅಲ್ಲದೇ ತಾನು ಬೆಳೆದ ಮೆಕ್ಕೆಜೋಳ ಸರಿಯಾಗಿ ಮಳೆ ಆಗದೇ ಬೆಳೆ ಹಾನಿಯಾದ ಪರಿಣಾಮ ಮಾನಸಿಕವಾಗಿ ಕುಗ್ಗಿದ್ದ ಇವರು ಗುರುವಾರ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.