ಕೊಪ್ಪಳ | ಕಾಂಗ್ರೆಸ್ ನಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಪರಿಪಾಲನೆ ಇದೆ : ಹಸಗೋಡು ಜಯಸಿಂಹ
ಕೊಪ್ಪಳ/ ಕನಕಗಿರಿ: ಪಕ್ಷದಲ್ಲಿ 4 ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪರಿಣಾಮ ಪಕ್ಷ ತಮಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾನ ನೀಡಿ ಗೌರವಿಸಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಸಗೋಡು ಜಯಸಿಂಹ ತಿಳಿಸಿದರು.
ಇಲ್ಲಿನ ಕನಕಾಚಲಪತಿ ಹಾಗೂ ರಾಘವೇಂದ್ರ ಮಠಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ನಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಪರಿಪಾಲನೆ ಇದೆ, ಪಕ್ಷದಲ್ಲಿ ಬಡವ, ಶ್ರೀಮಂತ, ಜಾತಿ ಭೇದ ಭಾವನೆಗಳು ಇಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಗುತ್ತದೆ ಎಂದು ತಿಳಿಸಿದರು.
ಬ್ರಾಹ್ಮಣ ಸಮಾಜ ಬಾಂಧವರ ಸಬಲೀಕರಣ ಹಾಗೂ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಅಭಿವೃದ್ಧಿ ಮಂಡಳಿ ವತಿಯಿಂದ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಮಹಿಳೆಯರ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೆಎಎಸ್ ಹಾಗೂ ಐಎಎಸ್ ತರಬೇತಿ ಪಡೆಯಲು ಆರ್ಥಿಕ ಸಹಾಯ ಹಾಗೂ ಪದವಿ ಪೊರೈಸಿದವರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇಂಥ ಸೌಲಭ್ಯಗಳನ್ನು ಪಡೆಯುವ ಮೂಲಕ ಬ್ರಾಹ್ಮಣ ಸಮುದಾಯದವರು ಉನ್ನತ ಹುದ್ದೆಯನ್ನು ಹೊಂದಬೇಕೆಂದು ತಿಳಿಸಿದರು.
ಕನಕಾಚಲಪತಿ ದೇವಸ್ಥಾನ ಸಮಿತಿ ವತಿಯಿಂದ ಜಯಸಿಂಹ ಅವರನ್ನು ಸನ್ಮಾನಿಸಲಾಯಿತು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ವೆಂಕಟೇಶ ಕುಲಕರ್ಣಿ, ವಿಧಾನಸಭಾ ಕ್ಷೇತ್ರ ಮಟ್ಟದ ಶೈಕ್ಷಣಿಕ ಸುಧಾರಣಾ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಕೆ.ಎಚ್. ಕುಲಕರ್ಣಿ, ಗಾಯಕ ಗಣೇಶ ಕಳ್ಳಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸಂತಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಅನಿಲಕುಮಾರ ಬಿಜ್ಜಳ, ನೂರುಸಾಬ ಗಡ್ಡಿಗಾಲ, ಶರಣೆಗೌಡ ಪಾಟೀಲ, ಕೃಷಿ ಪ್ರಾಥಮಿಕ ಪತ್ತಿನಸಹಕಾರಿ ಸಂಘದ ನಿರ್ದೇಶಕ ರಾಘವೇಂದ್ರ ಚಿತ್ರಗಾರ, ಪ್ರಮುಖರಾದ ರವಿ ಪಾಟೀಲ, ಟಿ.ಜೆ ರಾಮಚಂದ್ರ, ನಾಗರಾಜ ಭಾವಿಕಟ್ಟಿ, ಶಿಕ್ಷಕ ಗೋಪಾಲಕೃಷ್ಣ ಕುಲಕರ್ಣಿ, ಹನುಮೇಶ ಜನಾದ್ರಿ ಇತರರು ಇದ್ದರು.