ಕೊಪ್ಪಳ | ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ: ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ನಗರದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಓ ಮುಖಂಡ ಶರಣು ಗಡ್ಡಿ, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡಿದ್ದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಹಾಗೆಯೇ ಉಳಿದಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು, ಸಂಸ್ಥೆಗಳನ್ನು ಖಾಸಗಿ ಅವರಿಗೆ ಮಾರಾಟಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ, ಇನ್ನಾದರೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಮುಖಂಡ ಶರಣು ಪಾಟೀಲ್ ಮಾತನಾಡಿ, ಎಲ್ಲಾ ಹುದ್ದೆಗಳ ನೇಮಕಾತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಬೇಕು. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ, ಪಾರದರ್ಶಕತೆಯನ್ನು ಕಾಪಾಡಬೇಕು. ಇತ್ತೀಚೆಗೆ ಕೆಇಎ ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಕೇಂದು ಒತ್ತಾಯಿಸಿದರು.
ನಿಂಗಪ್ಪ ಬೆಣಕಲ್ ಅವರು ಮಾತನಾಡಿ ಸರ್ಕಾರಗಳು ಯುವಕರಿಗೆ ಸುಳ್ಳು ಭರವಸೆಯನ್ನು ನೀಡಿ ಮೋಸ ಮಾಡಿವೆ. ಇನ್ನಾದರೂ ಉದ್ಯೋಗಗಳನ್ನು ಭರ್ತಿ ಮಾಡುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲಾ ಬಂದ್ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಸೈಯದ್ ತೌಫಿಕ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ವೋಟು ಕೇಳುವಾಗ ಇರುವ ಕಾಳಜಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸುವಾಗ ಇರುವುದಿಲ್ಲ. ಯುವಕರನ್ನು ಬೀದಿಗಿಳಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನಾಚಿಕೆಯಾಗಬೇಕೆಂದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಪರವಾಗಿ ನಗರ ಯೋಜನಾ ನಿರ್ದೇಶಕ ಮಂಜುನಾಥ್ ಗುಂಡೂರ್ ಅವರು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ನಂತರ ಮನವಿ ಪತ್ರಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಅವರಿಗೆ ಕಳುಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸುಭಾನ್ ನೀರಲಗಿ, ಸಾಮಾಜಿಕ ಕಾರ್ಯಕರ್ತೆ ಶಶಿಕಲಾ ಹಿರೇ ಸಿಂದೋಗಿ, ಉದ್ಯೋಗಾಕಾಂಕ್ಷಿಗಳಾದ ಶಿವಮೂರ್ತಿ ವದಗನಾಳ್, ಬಸವರಾಜ್ ತಾವರಗೇರಾ, ಶರಣು ಆಗೋಲಿ, ಶಿವಕುಮಾರ್ ಕಂಚಿ, ನಾಗರಾಜ್ ವಿಠಲಾಪುರ್, ಹೊನ್ನೂರ್ ಬೋಚನಹಳ್ಳಿ, ಪ್ರದೀಪ್ ಮಾದಿನೂರು, ಮಾರುತಿ ನಾಗೇಶನ ಹಳ್ಳಿ, ಮೌನೇಶ್ ಮಂಗಳೂರು, ಯಮನೂರ ಚಳ್ಳಾರಿ ಮತ್ತು ಪ್ರಾಣೇಶ ಹಾಲವರ್ತಿ ಸೇರಿದಂತೆ ಅನೇಕರು ಭಾಗವಹಿಸಿದರು.