ಕೊಪ್ಪಳ | ವಿ.ಸೋಮಣ್ಣ ಮೇಲೆ ಹಲ್ಲೆ ಯತ್ನ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ನಿಯೋಗ ಆಗ್ರಹ
ಕೊಪ್ಪಳ: ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮೇಲೆ ಹಲ್ಲೆಗೆ ಮುಂದಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಜಿಲ್ಲಾ ಬಿಜೆಪಿ ನಿಯೋಗವು ಬುಧವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಎಸ್‌ಪಿ ಡಾ.ರಾಮ್.ಎಲ್.ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ರೈಲ್ವೆ ಸೇತುವೆ ಕಾಮಗಾರಿ ಭೂಮಿಪೂಜೆಗೆ ಎರಡು ದಿನಗಳ ಹಿಂದೆ ಆಗಮಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಅವರ ಭೇಟಿಯ ವೇಳೆ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ಶಿಷ್ಟಾಚಾರ ಉಲ್ಲಂಘನೆಯಾಗದಿದ್ದರೂ, ಕೇಂದ್ರ ಸಚಿವರಿಗೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಹಲ್ಲೆಗೆ ಮುಂದಾಗಿರುವುದು ಖಂಡನೀಯ. ಸಂಸದ–ಶಾಸಕರ ತವರೂರಿನಲ್ಲಿಯೇ ಈ ರೀತಿ ಘಟನೆ ನಡೆಯುವುದು ದುರಂತಕರ ಸಂಗತಿ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಈ ಪ್ರಕರಣದಲ್ಲಿ ತಕ್ಷಣ ಸೊಮೋಟೋ ಪ್ರಕರಣ ದಾಖಲಿಸಿಕೊಂಡು ದೃಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಅಭಿವೃದ್ಧಿ ಉದ್ದೇಶದಿಂದ ಕೇಂದ್ರ ಸಚಿವರು ಕಾಮಗಾರಿ ಭೂಮಿಪೂಜೆಗೆ ಬಂದಿದ್ದಾಗ, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಮುಂದಾಗಿರುವುದು ಸರಿಯಲ್ಲ. ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಬೇಡವಾಗಿರುವುದರಿಂದಲೇ ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ದಡೇಸ್ಗೂರು ಮಾತನಾಡಿ, ಈ ಘಟನೆಯ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದರು. “ಕೇಂದ್ರ ಸಚಿವರು ಜಿಲ್ಲೆಗೆ ಬಂದಾಗ ಸೂಕ್ತ ಭದ್ರತೆ ಸಿಗದಿದ್ದರೆ ಹೇಗೆ? ಈ ವಿಚಾರದಲ್ಲಿ ಪೊಲೀಸ್ ಇಲಾಖೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪಣ್ಣ ಪದಕಿ, ಎಸ್.ಆರ್. ಭೂಸನೂರಮಠ, ಪೀರಾ ಹುಸೇನ ಹೊಸಳ್ಳಿ, ರಾಘವೇಂದ್ರ ಪಾನಗಂಟಿ, ಈಶಪ್ಪ ಮಾದಿನೂರ, ರಾಜು ಬಾಕಳೆ, ಸುನಿಲ್ ಹೆಸರೂರ, ಉಮೇಶ್, ರಮೇಶ್ ನಾಡಗೇರಾ, ರಾಜು ವಸ್ತ್ರದ ಸೇರಿದಂತೆ ಇತರರು ಉಪಸ್ಥಿತರಿದ್ದರು.