×
Ad

ಕೊಪ್ಪಳ | ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ʼಭಿಕ್ಷಾಟನೆ ಮುಕ್ತ ಜಾತ್ರೆʼ ಅಭಿಯಾನ : 16 ಭಿಕ್ಷುಕರ ರಕ್ಷಣೆ

Update: 2026-01-06 21:44 IST

ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ “ಭಿಕ್ಷಾಟನೆ ಮುಕ್ತ ಶ್ರೀ ಗವಿಸಿದ್ದೇಶ್ವರ ಜಾತ್ರೆ” ಅಭಿಯಾನವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಿಕ್ಷಾಟನೆ ನಿರ್ಮೂಲನೆಗಾಗಿ ಜಾತ್ರಾ ಮೈದಾನದಲ್ಲಿ ಅನಿರೀಕ್ಷಿತ ದಾಳಿ ನಡೆಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ–1098, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಹೈಬ್ರಿಡ್ ನ್ಯೂಸ್–ಕೊಪ್ಪಳ ಹಾಗೂ ಭಿಕ್ಷುಕರ ಪುನರ್ವಸತಿ ಕೇಂದ್ರ–ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಈ ದಾಳಿ ಆಯೋಜಿಸಲಾಗಿತ್ತು.

ದಾಳಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಅವರು, ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ–1975ರನ್ವಯ ಭಿಕ್ಷೆ ಬೇಡುವುದು ಅಪರಾಧವಾಗಿದ್ದು, ಭಿಕ್ಷುಕರನ್ನು ಗುರುತಿಸಿ ರಕ್ಷಿಸಿ, ಪುನರ್ವಸತಿ ಕೇಂದ್ರಗಳಲ್ಲಿ ಇರಿಸಿ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು. ಈ ಕಾರ್ಯಕ್ಕಾಗಿ ಸ್ಥಳೀಯ ಸಂಸ್ಥೆಗಳು ಶೇ.3 ಸೆಸ್ ಸಂಗ್ರಹಿಸುವ ಮೂಲಕ ವೆಚ್ಚ ಭರಿಸುತ್ತಿವೆ ಎಂದು ತಿಳಿಸಿದರು.

ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ–2015ರ ಕಲಂ 76ರನ್ವಯ ಮಕ್ಕಳಿಂದ ಭಿಕ್ಷೆ ಬೇಡಿಸುವುದು, ಭಿಕ್ಷೆಯ ಉದ್ದೇಶಕ್ಕಾಗಿ ಮಕ್ಕಳ ಅಂಗಾಂಗಗಳನ್ನು ಊನಗೊಳಿಸುವುದು ಗಂಭೀರ ಅಪರಾಧವಾಗಿದ್ದು, ಇದಕ್ಕೆ 7 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.1 ಲಕ್ಷ ದಂಡ ವಿಧಿಸುವ ಅವಕಾಶವಿದೆ ಎಂದರು. ಸಾರ್ವಜನಿಕರು ಭಿಕ್ಷೆ ನೀಡದೇ, ಅಂತಹವರನ್ನು ಅರ್ಹ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಲು ಅಥವಾ ತುರ್ತು ಸಹಾಯವಾಣಿ 112 / ಮಕ್ಕಳ ಸಹಾಯವಾಣಿ–1098ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಕ್ಕಳಿಂದ ಭಿಕ್ಷೆ ಬೇಡುವುದು ನಿಷೇಧಿತವಾಗಿದ್ದು, ಅಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು. ಮಕ್ಕಳಿಗೆ ಭಿಕ್ಷೆ ನೀಡದೇ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ, ಭಿಕ್ಷುಕರ ಪುನರ್ವಸತಿ ಕೇಂದ್ರ ಬಳ್ಳಾರಿಯ ಅಧೀಕ್ಷಕ ಚಿನ್ನಪಾಲಯ್ಯ, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕ ಶರಣಪ್ಪ ಚೌವ್ಹಾಣ ಹಾಗೂ ಸ್ವಯಂಸೇವಕರು, ಮಹಿಳಾ ಧ್ವನಿ ಸಂಘದ ಅಧ್ಯಕ್ಷೆ ಪ್ರಿಯದರ್ಶಿನಿ ಮುಂಡರಗಿಮಠ, ಹೈಬ್ರಿಡ್ ನ್ಯೂಸ್ ಸಂಸ್ಥಾಪಕ ಬಿ.ಎನ್. ಪೋರಪೇಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ) ರವಿಕುಮಾರ, ಮಕ್ಕಳ ಸಹಾಯವಾಣಿ–1098ರ ಶರಣಪ್ಪ ಸಿಂಗನಾಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಅನಿರೀಕ್ಷಿತ ದಾಳಿಯಲ್ಲಿ 16 ಮಂದಿ ಭಿಕ್ಷುಕರನ್ನು ರಕ್ಷಿಸಿ ಬಳ್ಳಾರಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News