ಕೊಪ್ಪಳ | ಸಂಸದರ ಒಡೆತನದ ಸಂಸ್ಥೆ ಮೂಲಕವೇ ಜಲ್ಲಿಕಲ್ಲು ಖರೀದಿಗೆ ಒತ್ತಾಯ: ಗುತ್ತಿಗೆದಾರರಿಂದ ಆರೋಪ
ಕೊಪ್ಪಳ, ನ.12: ಕ್ರಷರ್ ಮತ್ತು ಸಿವಿಲ್ ಕಾಮಗಾರಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಕೊಪ್ಪಳ ಸಂಸದ ರಾಘವೇಂದ್ರ ಹಿಟ್ನಾಳ್ ಒಡೆತನದ ಸಂಸ್ಥೆಯಾದ ಪ್ರೇರಣಾ ಸಂಸ್ಥೆಯ ಮೂಲಕವೇ ಖರೀದಿಸಬೇಕು ಎಂದು ನಿಯಮ ಹೇರಲಾಗಿದೆ ಎಂದು ಆರೋಪಿಸಿ ಕೊಪ್ಪಳ ಜಿಲ್ಲಾ ಗುತ್ತಿಗೆದಾರ ಸಂಘದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ನಗರದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗೆ
ಮನವಿ ಸಲ್ಲಿಸಿದರು.
<ಪ್ರತಿಭಟನೆಗೆ ಕಾರಣವೇನು?
ಸಂಸದ ರಾಜಶೇಖರ ಹಿಟ್ನಾಳ್ ಅವರು ತಮ್ಮದೆ ಒಡೆತನದ ಪ್ರೇರಣಾ ಎನ್ನುವ ಸಂಸ್ಥೆ ಸ್ಥಾಪಿಸಿದ್ದು, ಗುತ್ತಿಗೆದಾರರು ಮತ್ತು ಜಿಲ್ಲೆಯ ಸಾರ್ವಜನಿಕರು ಕ್ರಷರ್‌ಗೆ ಸಂಬಂದಿಸಿದ ಜಲ್ಲಿಕಲ್ಲುಗಳನ್ನು ಪ್ರೇರಣಾ ಸಂಸ್ಥೆಯ ಮೂಲಕವೇ ಖರೀದಿಸಬೇಕೆಂದು ಕ್ರಷರ್ ಮಾಲಕರೊಂದಿಗೆ ಪ್ರೇರಣಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದು, ಈ ಒಪ್ಪಂದವು ಗುತ್ತಿಗೆದಾರನ್ನು ಕೆರಳಿಸಿದೆ.
ಪ್ರೇರಣಾ ಸಂಸ್ಥೆ ಮೂಲಕ ಖರೀದಿಗೆ ಸಿದ್ಧವಿಲ್ಲದ ಗುತ್ತಿಗೆದಾರರು ಇದು ಏಕಸ್ವಾಮ್ಯ ಮಾರುಕಟ್ಟಗೆ ದಾರಿಮಾಡುತ್ತಿದ್ದು ನಮಗೆ ಜಿಎಸ್‌ಟಿ ಪಾವತಿ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಲಿವೆ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ಕೃಷ್ಣ ಇಟ್ಟಂಗಿ, ಸುರೇಶ ಭೂಮರೆಡ್ಡಿ,ದೇವಪ್ಪ ಅರಕೇರಿ,ರಾಜಶೇಖರ್ ಗಂಗಾವತಿ,ಯಮನೂರಪ್ಪ ನಡುಮನಿ,ಸುಖರಾಜ್ ತಾಳಕೇರಿ, ಹನುಮೇಶ್ ಕಡೆಮನಿ,ಪ್ರಸಾದ ಗಂಗಾವತಿ, ಶರಣೆಶ್ ಹೂಗಾರ್ ಇನ್ನು ಅನೇಕ ಗುತ್ತಿಗೆದಾರರು ಮತ್ತು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಂಸದರ ಹೆಸರು ಹೇಳದ ಪ್ರತಿಭಟನಾಕಾರರು
ಪ್ರೇರಣಾ ಸಂಸ್ಥೆ ವಿರುದ್ಧ ಪ್ರತಿಭಟಿಸಿದ ಗುತ್ತಿಗೆದಾರರು ಎಲ್ಲಿಯೂ ಹಿಟ್ನಾಳ್ ಸಹೋದರರ ಹೆಸರನ್ನು ಹೇಳಲಿಲ್ಲ, ಕೊನೆಯಲ್ಲಿ ಕೃಷ್ಣ ಇಟ್ಟಂಗಿ ಮಾತ್ರ ಹಿಟ್ನಾಳ್ ಸಹೋದರರ ಹೆಸರನ್ನು ಉಲ್ಲೇಖಿಸಿದರು. ಇದನ್ನು ನೋಡಿದರೆ ಗುತ್ತಿಗೆದಾರಲ್ಲೇ ಎಲ್ಲವೂ ಸರಿ ಇಲ್ಲ ಎಂದು ಕಾಣುತ್ತಿದೆ. ಮೊದಲು ಗುತ್ತಿಗೆದಾರರು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿದುಕೊಂಡು ನಂತರ ಪ್ರತಿಭಟಿಸಲಿ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.