ಕೊಪ್ಪಳ | ಎಸ್‌ಸಿ–ಎಸ್‌ಟಿ ಯೋಜನೆಗಳಿಗೆ ಅನುದಾನ ಸಿಗದಂತಾಗಿದೆ : ದ್ಯಾಮಣ್ಣ ಪೂಜಾರ
ಕೊಪ್ಪಳ : ಎಸ್‌ಸಿ–ಎಸ್‌ಟಿ ಯೋಜನೆಗಳಿಗೆ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ದಲಿತ ವಿಮೋಚನಾ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಪೂಜಾರ ಆರೋಪಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಿವಾಹ ಪ್ರೋತ್ಸಾಹಧನ ಯೋಜನೆಗಳಿಗೆ ಹಲವು ವರ್ಷಗಳಿಂದ ಅನುದಾನ ಮಂಜೂರಾಗಿಲ್ಲ ಎಂದು ದೂರಿದರು.
ಸಂಘಟನೆಯ ವತಿಯಿಂದ ಫೆ.3, 2026ರಂದು ಬಾಕಿ ಇರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಸರಳ ವಿವಾಹ, ಅಂತರ್ಜಾತಿ ವಿವಾಹ (ಪರಿಶಿಷ್ಟ ಜಾತಿ), ದೇವದಾಸಿ ಮಕ್ಕಳ ವಿವಾಹ ಹಾಗೂ ಒಳಪಂಗಡಗಳ ವಿವಾಹಗಳಿಗೆ ಸಂಬಂಧಿಸಿದಂತೆ ಒಟ್ಟು 7.77 ಕೋಟಿ ರೂ. ಪ್ರೋತ್ಸಾಹಧನ ಬಾಕಿ ಇರುವುದಾಗಿ ಉಪನಿರ್ದೇಶಕರಿಂದ ನೀಡಲಾದ ಹಿಂಬರಹದಲ್ಲೂ ಉಲ್ಲೇಖವಾಗಿದೆ ಎಂದು ತಿಳಿಸಿದರು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಿಗಾಗಿ ಮೀಸಲಿಟ್ಟ ಅನುದಾನವನ್ನು ಇತರ ಇಲಾಖೆಗಳ ಕಾಮಗಾರಿಗಳಿಗೆ ವರ್ಗಾವಣೆ ಮಾಡುತ್ತಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಯೋಜನೆಗಳಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ಕೂಡಲೇ ಫಲಾನುಭವಿಗಳಿಗೆ ಬಾಕಿ ಪ್ರೋತ್ಸಾಹಧನ ಮಂಜೂರು ಮಾಡಬೇಕು. 15 ದಿನಗಳೊಳಗೆ ಮನವಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ವಿಮೋಚನಾ ಸೇನೆ ರಾಜ್ಯ ಉಪಾಧ್ಯಕ್ಷ ಎಸ್. ದುರ್ಗಪ್ಪ, ಜಿಲ್ಲಾಧ್ಯಕ್ಷ ರಮೇಶ್ ಸೋಮನಾಳ, ಅಲ್ಪಸಂಖ್ಯಾತರ ಅಧ್ಯಕ್ಷ ಕಮಲ್ ಪಾಶಾ, ಜಿಲ್ಲಾ ಉಪಾಧ್ಯಕ್ಷ ಮಾರುತಿ.ವಿ ಹಾಗೂ ಯಲಬುರ್ಗಾ ತಾಲೂಕು ಅಧ್ಯಕ್ಷ ಮಾರುತಿ ಉಪಸ್ಥಿತರಿದ್ದರು.