×
Ad

Koppala | ಬಳ್ಳಾರಿ ಘಟನೆಗೆ ದ್ವೇಷದ ರಾಜಕೀಯ, ತಾಳ್ಮೆಯ ಕೊರತೆಯೇ ಕಾರಣ : ಶಾಸಕ ಬಸವರಾಜ್ ರಾಯರಡ್ಡಿ

Update: 2026-01-07 16:46 IST

ಕೊಪ್ಪಳ : ಬಳ್ಳಾರಿಯಲ್ಲಿ ನಡೆದ ಘಟನೆಗೆ ಆವೇಶಭರಿತ, ತಾಳ್ಮೆ ಇಲ್ಲದ ದ್ವೇಷದ ರಾಜಕೀಯವೇ ನೇರ ಕಾರಣ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಆರೋಪಿಸಿದರು.

ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭರತ್ ರೆಡ್ಡಿ ಇನ್ನೂ ಯುವಕ. ತಪ್ಪು ಮಾಡಿದ್ದರೆ ತಪ್ಪು ಮಾಡಬೇಡ ಎಂದು ಹೇಳಬೇಕಾಗಿತ್ತು. ಆದರೆ ಜನಾರ್ಧನ ರೆಡ್ಡಿ ಅವರು ಹಿರಿಯ ಅಣ್ಣನ ಸ್ಥಾನದಲ್ಲಿದ್ದುಕೊಂಡು ತಾಳ್ಮೆ ಪ್ರದರ್ಶಿಸಬೇಕಾಗಿತ್ತು. ನಾನು ತಪ್ಪು–ಒಪ್ಪು ವಿಚಾರಕ್ಕೆ ಹೋಗುವುದಿಲ್ಲ, ಆದರೆ ಹಿರಿಯರಾದವರು ಕಿರಿಯರಿಗೆ ಬುದ್ಧಿ ಹೇಳಬೇಕು. ಜನಾರ್ಧನ ರೆಡ್ಡಿ ವಯಸ್ಸಿನಲ್ಲಿ ಹಿರಿಯರಾಗಿರುವುದರಿಂದ ಅವರಿಗೆ ತಾಳ್ಮೆ ಇರಬೇಕಿತ್ತು. ಆದರೆ ಅವರು ತಾಳ್ಮೆ ತೋರದೆ ಪ್ರಚೋದನೆ ನೀಡಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಹೇಳಿದರು.

ಜನಾರ್ಧನ ರೆಡ್ಡಿ ಅವರ ಕಡೆಯವರು ಹೀಗೆ ಏಕಾಏಕಿ ಬ್ಯಾನರ್ ಹರಿದು ಹಾಕಬಾರದಿತ್ತು. ಆ ಬ್ಯಾನರ್ ಇರುವುದು ಮುನ್ಸಿಪಾಲಿಟಿ ಜಾಗದಲ್ಲಿ, ಅದು ರೆಡ್ಡಿಯವರ ಖಾಸಗಿ ಜಾಗದಲ್ಲಿರಲಿಲ್ಲ. ಏಕಾಏಕಿ ಬ್ಯಾನರ್ ಹರಿದು ಹಾಕಿದ್ದರಿಂದ ಸಿಟ್ಟು ಉಂಟಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು. ಬ್ಯಾನರ್ ಹರಿದು ಹಾಕಿದ ತಕ್ಷಣ ದೂರು ನೀಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂದು ಹೇಳಿದರು.

ಈ ಘಟನೆಯಲ್ಲಿ ಫೈರಿಂಗ್ ನಡೆದಿದ್ದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ. ಈ ಕುರಿತು ತನಿಖೆ ನಡೆಯಲಿದ್ದು, ಫೈರಿಂಗ್ ಯಾರಿಂದ ನಡೆದಿದೆ ಎಂಬುದರ ಕುರಿತು ವರದಿ ಹೊರಬೀಳಲಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮೇಲೆ ಹಲ್ಲೆ ಯತ್ನದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ರಾಜಕೀಯ ನಾಯಕರು ಆದರ್ಶಪ್ರಾಯರಾಗಬೇಕು. ಕಾನೂನನ್ನು ಗೌರವಿಸುವ ಮನೋಭಾವ ಇರಬೇಕು. ಪಕ್ಷಭೇದವಿಲ್ಲದೆ ಎಲ್ಲರೂ ಒಂದೇ ರೀತಿಯಲ್ಲಿ ವರ್ತಿಸಬೇಕು. ಸೋಮಣ್ಣ ಅವರ ಮೇಲಿನ ಹಲ್ಲೆ ಯತ್ನವನ್ನು ಬಳ್ಳಾರಿ ಘಟನೆಯೊಂದಿಗೆ ಹೋಲಿಕೆ ಮಾಡಬಾರದು. ಅದು ಒಂದು ಸಣ್ಣ ಘಟನೆ. ಆ ವಿಚಾರವನ್ನು ಸರಿಯಾಗಿ ಹ್ಯಾಂಡಲ್ ಮಾಡಿಕೊಳ್ಳಲು ಸೋಮಣ್ಣ ಅವರಿಗೆ ಆಗಿಲ್ಲ ಎಂದು ಹೇಳಿದರು.

ನಾನು ರಾತ್ರಿ ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಮಾತನಾಡಿದ್ದೆ. ಎಲ್ಲವೂ ಸರಿ ಇತ್ತು, ಮತ್ತೆ ಯಾಕೆ ಚೇರ್ ಎತ್ತಿ ಗಲಾಟೆ ಮಾಡಲಾಯಿತು ಎಂದು ಪ್ರಶ್ನಿಸಿದ್ದೇನೆ. ಅದಕ್ಕೆ ಅವರು, ನಾನು ಏನೂ ಮಾಡಿಲ್ಲ, ನನ್ನ ಹೆಸರು ಇಲ್ಲದಿದ್ದಕ್ಕೆ ಊರಿನ ಹುಡುಗರು ಆ ರೀತಿ ಮಾಡಿದ್ದಾರೆ. ಸೋಮಣ್ಣ ಅವರು “ನೀವು ಏನು ಮಾಡ್ಕೊಳ್ತೀರೋ ಮಾಡ್ಕೊಳ್ಳಿ” ಅಂತ ಹೇಳಿದ್ರು, ಅದಕ್ಕೆ ನಮ್ಮವರು ಸಿಟ್ಟಿಗೆದ್ದು ಏನೋ ಮಾಡಿದ್ದಾರೆ ಎಂದು ಉತ್ತರಿಸಿದ್ದಾರೆ ಎಂದು ರಾಯರಡ್ಡಿ ಹೇಳಿದರು.

ನಾನು ನಂತರ ಸೋಮಣ್ಣ ಅವರ ಜೊತೆಯೂ ಮಾತನಾಡಿದ್ದೇನೆ. ಅವರು ಅಸಹಾಯಕರಾಗಿದ್ದರು. ರೈಲ್ವೆ ಅಧಿಕಾರಿಗಳು ಬಹಳ ಗರ್ವದಿಂದ ಮಾತನಾಡುತ್ತಾರೆ, ಹೀಗೆ ಮಾತನಾಡಬಾರದು ಎಂದು ಹೇಳಿದ್ದಾರೆ ಎಂದು ಬಸವರಾಜ್ ರಾಯರಡ್ಡಿ ವಿವರಿಸಿದರು.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News