ಕೊಪ್ಪಳ : ಲಯನ್ಸ್ ಸಂಸ್ಥೆಯಿಂದ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಬೆಂಬಲ
ಕೊಪ್ಪಳ: ಆಸೆ ಮಿತಿಮೀರಿ ಹಣವಿದ್ದರೂ ನೆಮ್ಮದಿಯ ನಿದ್ರೆ ಇಲ್ಲದಂತಾಗಿದೆ. ಭಾರತದಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ಕೊಡಬೇಕು. ಇಲ್ಲವಾದರೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚಾಟದಿಂದ ಅಭಿವೃದ್ಧಿ ಆಗಿ ನಾವೇ ಅಂಗವಿಕಲರಾದರೆ ಅಂತಹ ಅಭಿವೃದ್ಧಿಗೆ ಅರ್ಥವಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಯನ್ಸ್ ಶ್ರೀನಿವಾಸ್ ಗುಪ್ತಾ ಹೇಳಿದರು.
ನಗರಸಭೆ ಹತ್ತಿರ ನಡೆಯುತ್ತಿರುವ ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸಿಂಡಿಯಾ, ಹೊಸಪೇಟೆ ಸ್ಟೀಲ್ಸ್ ಇತರೆ ಮಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿಯ 37ನೇ ದಿನ ಕೊಪ್ಪಳ ಲಯನ್ಸ್ ಕ್ಲಬ್, ಸ್ವಾಮಿ ವಿವೇಕಾನಂದ ಶಾಲೆ ಮತ್ತು ಸ್ವಾಮಿ ವಿವೇಕಾನಂದ ಸಿಬಿಎಸ್ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ಮತ್ತು ಸಿಬ್ಬಂದಿ ಭಾಗವಹಿಸಿದರು. ಸಣ್ಣ ಗುಡಿ ಕೈಗಾರಿಕೆಗಳನ್ನು ತಂದರೆ ಒಳ್ಳೆಯದು ಹೊರತು ಈ ರೀತಿಯ ಕಾರ್ಖಾನೆಗಳಿಂದ ನಯಾಪೈಸೆ ಲಾಭವಿಲ್ಲ, ಕೊಪ್ಪಳ ಇಲ್ಲಿಯವರೆಗೆ ಬೆಳೆದದ್ದು ಇಲ್ಲಿನವರ ಶ್ರಮದಿಂದ ಹೊರತು ಕಾರ್ಖಾನೆಗಳಿಂದ ಅಲ್ಲವೇ ಅಲ್ಲ. ಹೋರಾಟಕ್ಕೆ ನಾವು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿ, ಹೆಚ್ಚಿನ ಮಹಿಳೆಯರನ್ನು ಸೇರಿಸೋಣ, ಇಂತಹ ಹೋರಾಟ ರೂಪಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ನಿವೃತ್ತ ಎಲ್‌ಐಸಿ ಅಧಿಕಾರಿ ವೆಂಕಟೇಶ್ ಶ್ಯಾನಬಾಗ್ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಗಾಳಿ ಕೊಡಿ ಎಂದು ಸರಕಾರವನ್ನು ಅಂಗಲಾಚುತ್ತಿದ್ದೇವೆ. ಪಂಚಭೂತಗಳಿಂದ ನಿರ್ಮಾಣ ಆದ ನಮ್ಮ ಶರೀರ ಈಗ ಕೆಡುತ್ತಿದೆ. ನಮ್ಮೂರಲ್ಲಿ ಇರುವ ಹಸಿರು ಗಿಡಮರಗಳು ಕೆಂಪಾಗಿ ನಮ್ಮ ಮಕ್ಕಳು ಪ್ರಶ್ನೆ ಮಾಡುವಂತೆ ಆಗುತ್ತದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಈಗಿರುವ ಕಾರ್ಖಾನೆಗಳ ಹೊಲಸು, ಧೂಳು, ವಿಷಾನಿಲ ನಿಭಾಯಿಸಲು ಸಾಧ್ಯವಿಲ್ಲದಾಗ ಮುಂದೆ ಆಧುನಿಕ ತಂತ್ರಜ್ಞಾನ ತರ್ತಿವಿ ಅದರಿಂದ ಮಾಲಿನ್ಯ ಆಗಲ್ಲ ಎನ್ನುವುದು ಕೇವಲ ಕಣ್ಣೊರೆಸುವ ತಂತ್ರ. ನಾವು ಯಾರನ್ನೂ ದೂಷಿಸದೇ ಹೋರಾಟ ಮಾಡೋಣ. ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ಇದು ಸಮಾಜದ ಕರ್ತವ್ಯ ಎಂದು ಹೇಳಿದರು.
ಈ ವೇಳೆ ಹೋರಾಟ ವೇದಿಕೆಯ ಮಂಜುನಾಥ ಜಿ. ಗೊಂಡಬಾಳ ಸೇರಿ ಅನೇಕರು ಮಾತನಾಡಿದರು. ಧರಣಿಯಲ್ಲಿ ಡಿ. ಎಂ. ಬಡಿಗೇರ, ಶರಣು ಗಡ್ಡಿ, ಪ್ರೊ. ಮನೋಹರ ದಾದ್ಮಿ, ಗುರುರಾಜ ಹಲಗೇರಿ, ಪಂಪಣ್ಣ ವಾರದ, ಸುಜಾತಾ ಹಲಗೇರಿ, ಜ್ಯೋತಿ ಅಗಡಿ, ಅಪರ್ಣ ಬಳ್ಳೊಳ್ಳಿ, ಸ್ಪೂರ್ತಿ ಮಾಗಿ, ಸಿ. ವಿ. ಜಡಿಯವರ, ಶಾಂತಯ್ಯ ಅಂಗಡಿ, ಮಹಾದೇವಪ್ಪ, ವಿ. ಬಿ. ಕಟ್ಟಿ, ವಿರೇಶ ಕೊಪ್ಪಳ, ಮಾರುತಿ, ರವಿ ಕಾಂತನವರ, ಪದ್ಮನಗೌಡ ಪಾಟೀಲ್, ಮುದಕಪ್ಪ ಹೊಸಮನಿ, ಎಸ್. ಬಿ. ರಾಜೂರ, ಎಫ್.ಎಸ್.ಜಾಲಿಹಾಳ, ಟಿ. ಆರ್. ಬೆಲ್ಲದ, ಜಿ. ಬಿ. ಪಾಟೀಲ್, ಎಸ್. ಕೆ. ಸಿದ್ನೆಕೊಪ್ಪ, ಸ್ವಾಮಿ ವಿವೇಕಾನಂದ ಸಿಬಿಎಸ್ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಕೆ. ಕಂಡಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.