ಕೊಪ್ಪಳ | ಬಿಸಿಯೂಟದಲ್ಲಿ ಹುಳ ಪತ್ತೆ ಪ್ರಕರಣ : ಮೂವರು ಅಧಿಕಾರಿಗಳ ಅಮಾನತು
Update: 2026-01-09 09:50 IST
ಕೊಪ್ಪಳ: ತಾಲ್ಲೂಕಿನ ಶಾಲೆಯೊಂದರ ಬಿಸಿ ಊಟದಲ್ಲಿ ಹುಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿ ಅನಿತಾ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೊಪ್ಪಳ ತಾಲ್ಲೂಕಿನ ಹೊಸನಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಡಿಸಲಾದ ಬಿಸಿ ಊಟದಲ್ಲಿ ಹುಳುಗಳು ಪತ್ತೆಯಾಗಿದ್ದವು. ಈ ಘಟನೆಯಿಂದ ಆತಂಕಗೊಂಡ ಪೋಷಕರು ಹಾಗೂ ಸಾರ್ವಜನಿಕರು ಶಾಲಾ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಗಂಭೀರ ಕರ್ತವ್ಯ ಲೋಪವನ್ನು ಪರಿಗಣಿಸಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಅನಿತಾ, ಕುಷ್ಟಗಿ ತಾಲ್ಲೂಕು ನಿರ್ದೇಶಕ ಮಲ್ಲಿಕಾರ್ಜುನ ಗುಡಿ ಹಾಗೂ ನಿರ್ದೇಶಕ ಮಹಂತಯ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.