×
Ad

ಕುಕನೂರು | ಆಡೂರ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

Update: 2026-01-09 21:42 IST

ಕುಕನೂರು: ತಾಲ್ಲೂಕಿನ ಆಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕುಕನೂರು ತಾಲ್ಲೂಕಿನ ಗ್ರಾಮೀಣ ಕ್ಲಸ್ಟರ್ ಮಟ್ಟದ ‘ಕಲಿಕಾ ಹಬ್ಬ’ವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಯಿತು.

ಮಕ್ಕಳ ಕಲಿಕಾ ಆಸಕ್ತಿ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಹಬ್ಬವನ್ನು ‘ಕಲಿಕಾ ಚಿಟ್ಟೆ’ ಅನಾವರಣಗೊಳಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರೌಢಶಾಲಾ ಶಿಕ್ಷಕರ ವಿಭಾಗದ ರಾಜ್ಯ ಉಪಾಧ್ಯಕ್ಷ ಮಹೇಶ್ ಸಬರದ ಅವರು, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸುವಲ್ಲಿ ಶಿಕ್ಷಕರ ಶ್ರಮದ ಜೊತೆಗೆ ಪೋಷಕರ ಸಕ್ರಿಯ ಸಹಕಾರವೂ ಅತ್ಯಗತ್ಯ. ಶಿಕ್ಷಣವು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ, ಮಗುವಿನ ಜೀವನಕ್ಕೆ ದಾರಿದೀಪವಾಗಬೇಕು ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಮಾರುತಿ ತಳವಾರ್ ಮಾತನಾಡಿ, ಮಕ್ಕಳು ಇಂದಿನ ಮೊಬೈಲ್ ಗೀಳಿನಿಂದ ಹೊರಬರಬೇಕು. ತಂತ್ರಜ್ಞಾನವನ್ನು ಕೇವಲ ಶಿಕ್ಷಣದ ಪೂರಕ ಮಾಹಿತಿಗಾಗಿ ಮಾತ್ರ ಬಳಸಬೇಕು. ‘ಪ್ರಶ್ನೆಯು ಪ್ರಜ್ಞೆಯಾಗಲಿ’ ಎಂಬ ಧ್ಯೇಯದೊಂದಿಗೆ ಮಕ್ಕಳು ಜ್ಞಾನ ಸಂಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ವೀರಣ್ಣ ಚೌಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಆರ್‌ಪಿ ಪೀರ್‌ಸಾಬ್ ದಪ್ಪದಾರ್, ನಾಗರಾಜ ಚಲವಾದಿ, ಶರಣಪ್ಪ ತೊಂಡಿಹಾಳ, ವೀರೇಶ ಬಟಪ್ನಳ್ಳಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಿದ್ದನಗೌಡ ರಬ್ಬನಗೌಡ, ಗ್ರಾ.ಪಂ ಉಪಾಧ್ಯಕ್ಷ ಕೋಟೇಶ್ ಗೊಂದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News