ಕುಷ್ಟಗಿ | ಹನುಮಸಾಗರದಲ್ಲಿ ಸಂಭ್ರಮದ 'ಕಲಿಕಾ ಹಬ್ಬ'ಕ್ಕೆ ಚಾಲನೆ
ಕುಷ್ಟಗಿ : ಮಕ್ಕಳಿಗೆ ಪಠ್ಯಾಭ್ಯಾಸದ ಜೊತೆಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಹನುಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹನುಮಸಾಗರ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್. (ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ) ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದ ಮನಸ್ಥಿತಿಯ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಓದದೇ ಉತ್ತೀರ್ಣರಾಗಬೇಕು, ದುಡಿಯದೇ ಹಣ ಗಳಿಸಬೇಕು ಎಂಬ ತಪ್ಪು ಮನೋಭಾವ ಸಮಾಜದಲ್ಲಿ ಬೆಳೆಯುತ್ತಿದೆ. ಆದರೆ, ಮಕ್ಕಳು ನಿರಂತರ ಅಭ್ಯಾಸ ಮತ್ತು ಕಠಿಣ ಶ್ರಮವನ್ನು ಮೈಗೂಡಿಸಿಕೊಂಡರೆ ಉನ್ನತ ಹುದ್ದೆಗಳು ತಾವಾಗಿಯೇ ಹುಡುಕಿ ಬರುತ್ತವೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನವನ್ನು ಬಲಪಡಿಸಲು ಈ ಕಲಿಕಾ ಹಬ್ಬ ಪೂರಕವಾಗಿದೆ. ಇಲ್ಲಿ ಕಥೆ ಹೇಳುವುದು, ಗಣಿತ ಚಟುವಟಿಕೆ, ಪರಿಸರ ಜಾಗೃತಿಯ ಛದ್ಮವೇಷ, ಪಾತ್ರಾಭಿನಯ ಸೇರಿದಂತೆ ಏಳು ಪ್ರಮುಖ ವಿಭಾಗಗಳಲ್ಲಿ ಒಟ್ಟು 70 ಚಟುವಟಿಕೆಗಳನ್ನು ನಡೆಸಲಾಗುವುದು. ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಗೌರಮ್ಮ ತಳವಾರ ಹಾಗೂ ಉಮಾ ನಾಗೂರ, ತಾಲೂಕು ಉಪಾಧ್ಯಕ್ಷ ಯಲ್ಲನಗೌಡ ಪಾಟೀಲ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಮಲ್ಲಪ್ಪ ಕುಂಬಾರ, ಗಂಗಾಧರಪ್ಪ, ಬಸಪ್ಪ ಬಂಡಿವಡ್ಡರ, ಭಾರತಿ ದೇಸಾಯಿ, ಮೈಬೂಬ ಬಾಗವಾನ, ಚಂದಪ್ಪ ಹಕ್ಕಿ, ಸದಾಶಿವಯ್ಯ ಹಿರೇಮಠ, ಬಸವರಾಜ ವಡ್ಡರ, ಮೈಬೂಬ ಮೇಣೆದಾಳ, ರಾಜಕುಮಾರ ನಾಯಕ, ಮೈಬೂಬಸಾಬ ಕಂದಗಲ್, ಅಶೋಕ ಕಟ್ಟಿಮನಿ, ಮುಖಂಡ ಮುದಿಯಪ್ಪ ವಾಲ್ಮೀಕಿ ಸೇರಿದಂತೆ ಹನುಮಸಾಗರ ಕ್ಲಸ್ಟರ್ ವ್ಯಾಪ್ತಿಯ 11 ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.