ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆಂದು ಹೇಳಿದ್ದ ಮೋದಿ, ಈಗ ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ : ಸಚಿವ ಶಿವರಾಜ್ ತಂಗಡಗಿ

Update: 2024-03-25 12:29 GMT

ಕೊಪ್ಪಳ: ‘ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆಂದು ಭರವಸೆ ನೀಡಿದ್ದ ಮೋದಿ, 10ವರ್ಷದಲ್ಲಿ 20ಕೋಟಿ ಉದ್ಯೋಗ ನೀಡುವ ಬದಲಿಗೆ ಇರುವ ಉದ್ಯೋಗಗಳನ್ನು ಕಸಿದುಕೊಂಡಿದ್ದಾರೆ. ಹೀಗಿರುವಾಗ ಯುವಕರು, ವಿದ್ಯಾರ್ಥಿಗಳು ಇನ್ನೂ ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಜಿಲ್ಲೆಯ ಕಾರಟಗಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅಧಿಕಾರಕ್ಕೆ ಬರುವಾಗ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಆದರೆ, ಯಾವುದೇ ಉದ್ಯೋಗವನ್ನು ನೀಡಲಿಲ್ಲ. ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ದೂರಿದರು.

‘ಇನ್ನು 5-10 ವರ್ಷ ಸುಳ್ಳು ಹೇಳುತ್ತಾರೆ. ಇವರ ಸುಳ್ಳುಗಳನ್ನು ಕೇಳಿಕೊಂಡು ಹೋಗಬೇಕಾ? ದೇಶದಲ್ಲಿ 100 ಸ್ಮಾರ್ಟ್‍ಸಿಟಿ ಮಾಡುತ್ತೇನೆಂದು ಹೇಳಿದ್ದರು. ಈಗ ಎಲ್ಲಿವೇ ಸ್ಮಾರ್ಟ್‍ಸಿಟಿ?. ಆದರೆ, ಬಿಜೆಪಿಯವರು ಮಾತ್ರ ಸ್ಮಾರ್ಟ್ ಆಗಿದ್ದಾರೆ. ಇದೀಗ ಸಮುದ್ರದ ಆಳಕ್ಕೆ ಹೋಗಿ ನವಿಲುಗರಿಯಿಂದ ಪೂಜೆ ಮಾಡುತ್ತಾರೆ. ಯಾವುದೇ ದೇಶದ ಪ್ರಧಾನಿ ಈ ರೀತಿಯಲ್ಲಿ ಮಾಡಲು ಸಾಧ್ಯವೇ?’ ಎಂದು ಅವರು ಪ್ರಶ್ನಿಸಿದರು.

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಸಂಗಣ್ಣ ಅವರು ಮೋದಿ ಮೋದಿ ಎಂದು ಹೊಗಳಿದರು. ಪಾಪ ಒಳ್ಳೆಯ ಮನುಷ್ಯ. ಅವರಿಗೆ ಟಿಕೆಟ್ ನೀಡದೆ ಮನೆಯಲ್ಲಿ ಕೂರಿಸಿದ್ದಾರೆ. ಸಂಗಣ್ಣ ಕಣದಲ್ಲಿಲ್ಲದೇ ಇರುವುದರಿಂದ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಆಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News