ʼಗ್ಯಾರಂಟಿʼ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಹೇಳಿಕೆ ನೀಡಿಲ್ಲ: ರಾಯರಡ್ಡಿ ಸ್ಪಷ್ಟನೆ
ಬಸವರಾಜ ರಾಯರಡ್ಡಿ
ಕೊಪ್ಪಳ : ʼನಾನು ಗ್ರಾಮಸ್ಥರ ಜೊತೆ ಆತ್ಮೀಯವಾಗಿ ಮಾತನಾಡಿದ್ದನ್ನು ತಿರುಚಿ ನಕಾರಾತ್ಮಕವಾಗಿ ಬರೆಯುತ್ತಾರೆ, ಹೀಗೆ ಬರೆಯಬಾರದುʼ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಸೋಮವಾರ ಬಾಲಕಿಯರ ನೂತನ ಪ್ರೌಢಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ʼಗ್ಯಾರಂಟಿ ಬೇಡ ಎಂದು ಹೇಳಿ ರಸ್ತೆ ಮಾಡಿಕೊಡುತ್ತೇವೆʼ ಎಂದು ಈ ಹಿಂದೆ ನೀಡಿದ್ದ ಹೇಳಿಕೆಯ ಕುರಿತು ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಅವರು, "ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಹೇಳಿಕೆ ನೀಡಿಲ್ಲ. ನಮ್ಮ ಸರಕಾರದಲ್ಲಿ ಅನುದಾನದ ಕೊರತೆಯಿಲ್ಲ. ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿದೆ. ಒಂದು ವೇಳೆ ಹಣಕಾಸು ಸಚಿವರನ್ನಾಗಿ ಮಾಡಿದರೆ, ಇನ್ನಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವೆ ಮತ್ತು ಪುರುಷರಿಗೂ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವೆ" ಎಂದು ಹೇಳಿದರು.
ಈ ಹಿಂದೆ ಶಾಸಕ ಬಸವರಾಜ ರಾಯರಡ್ಡಿ ಅವರು ಕುಕನೂರ ತಾಲೂಕಿನ ರ್ಯಾವಣಕಿ ಗ್ರಾಮದ ಶಾಲಾ ಕೊಠಡಿ ಉದ್ಘಾಟಿಸಿ ಮಾತಾಡಾಡುತ್ತಿದ್ದಾಗ, ಮಹಿಳೆಯರಿಗೆ ಗೃಹಲಕ್ಷ್ಮೀ ಕೊಡ್ತೀರಿ, ನಮಗೆ ರಸ್ತೆ ಕೊಡಿ ಎಂದು ವೇದಿಕೆಯ ಮುಂದೆ ಇದ್ದ ಜನರು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಯರಡ್ಡಿ, "ಅಕ್ಕಿ ಬೇಡ, ಗ್ಯಾರಂಟಿ ಬೇಡ, ನಮಗೆ ಏನೂ ಬೇಡಾ ಅಂತ ಹೇಳಿ ಅದೇ ಹಣದಲ್ಲಿ ರಸ್ತೆ ಮಾಡಿಕೊಟ್ಟ ಬಿಡ್ತೀವಿ, ನಮ್ಮ ಜನ ಗ್ಯಾರಂಟಿಗಳು ಬೇಡ ಎಂದು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟು ಬಿಡುತ್ತೇನೆ" ಎಂದು ಹೇಳಿದ್ದರು.