×
Ad

ಪ್ರತೀ ಹಳ್ಳಿಗೂ ರೈಲ್ವೆ ಯೋಜನೆ : ಕೇಂದ್ರ ಸಚಿವ ವಿ.ಸೋಮಣ್ಣ

Update: 2025-05-15 23:53 IST

ಕೊಪ್ಪಳ : ರೈಲ್ವೆ ಯೋಜನೆಗಳನ್ನು ಪ್ರತೀ ಹಳ್ಳಿಗೂ ತಲುಪಿಸುವ ಚಿಂತನೆ ನಮ್ಮ ಸರಕಾರದ್ದಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿ ದೇಶದಲ್ಲಿ 7 ಲಕ್ಷ ಕೋಟಿ ರೂ. ಹಳೆಯ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಭಾರತ ಸರಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಗುರುವಾರ ಕುಷ್ಟಗಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗದ ಗದಗ (ತಳಕಲ್ಲ) ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ ಹಾಗೂ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ರೈಲ್ವೆ ಸಾರಿಗೆಯಿಂದ ಜನರಿಗೆ ಅನುಕೂಲವಾಗಲಿದೆ. ದೇವೆಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ಬಸವರಾಜ ರಾಯರೆಡ್ಡಿ ಅವರು ಈ ಭಾಗದ ಸಂಸದರಾಗಿದ್ದ ಸಮಯದಲ್ಲಿ ಗದಗ-ವಾಡಿ ರೈಲು ಮಾರ್ಗದ ಯೋಜನೆ ಕೈಗೆತ್ತಿಕೊಂಡಿದ್ದರು. ಬಹು ದಿನಗಳ ನಂತರ ಈ ಭಾಗದ ಜನರ ಕನಸು ಈಗ ನನಸಾಗಿದೆ ಎಂದರು.

2025-26ನೇ ಸಾಲಿನಲ್ಲಿ ಗದಗ-ವಾಡಿ ರೈಲು ಯೋಜನೆಗೆ 549.45 ಕೋಟಿ ರೂ ಹಣವನ್ನು ಇರಿಸಿದೇವೆ. ಗದಗ-ವಾಡಿ ಮಧ್ಯ ಒಟ್ಟು 27 ರೈಲು ನಿಲ್ದಾಣಗಳು ಬರುತ್ತವೆ. ಎಲ್ಲ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಮ್ಮ ಸರಕಾರ ಆದ್ಯತೆ ನೀಡಿದೆ. ಇಂದು ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ದು, ಪ್ರತೀ ದಿನ ಕುಷ್ಟಗಿ-ಹುಬ್ಬಳ್ಳಿ ಮಧ್ಯೆ ಈ ರೈಲು ಸಂಚರಿಸಲಿದೆ. ಟಿಕೆಟ್ ದರ 70 ರೂ. ಇದ್ದು. ಬೆಳಿಗ್ಗೆ 7 ಗಂಟೆಗೆ ಕುಷ್ಟಗಿಯಿಂದ ಹೊರಟ ರೈಲು 10:40ಕ್ಕೆ ಹುಬ್ಬಳ್ಳಿ ತಲುಪಲಿದೆ. ಮತ್ತೆ ಸಂಜೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8:30ಕ್ಕೆ ಕುಷ್ಟಗಿ ಬಂದು ತಲುಪಲಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸೋಮಣ್ಣ ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಮಾತನಾಡಿ ಗದಗ-ವಾಡಿ ರೈಲು ಮಾರ್ಗದ ಬಹುದಿನಗಳ ಕನಸು ಈಗ ಈಡೇರಿದೆ. ಬಸವರಾಜ ರಾಯರೆಡ್ಡಿ ಅವರು ಸಂಸದರಾಗಿದ್ದ ಸಮಯದಲ್ಲಿ ಇದನ್ನು ಪ್ರಾರಂಭಿಸಿದರು. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶೇ. 50:50 ಪ್ರತಿ ಶತದಲ್ಲಿ ಅನುದಾನ ನೀಡುತ್ತವೆ. ಈ ಯೋಜನೆಗೆ ನಮ್ಮ ಸರಕಾರ ಭೂಮಿ ಒದಗಿಸುವ ಕೆಲಸವನ್ನು ಮಾಡಿದೆ. ಈ ಭಾಗದಿಂದ ಬೆಂಗಳೂರಿಗೆ ಹೋಗುವ ರೈಲು ವ್ಯವಸ್ಥೆ ಆಗಬೇಕು. ದರೋಜಿ-ಬಾಗಲಕೋಟ ಸರ್ವೇ ಆಗಬೇಕು. ಇದರಿಂದ ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕುಷ್ಟಗಿ ಪುರಸಭೆ ಅಧ್ಯಕ್ಷ ಮಹಾಂತೇಶ, ಜಿಲ್ಲಾಧಿಕಾರಿ ನಲಿನ್ ಅತುಲ್, ನೈರುತ್ಯ ರೈಲ್ವೆ ಹುಬ್ಬಳ್ಳಿಯ ವಿಭಾಗೀಯ ವ್ಯವಸ್ಥಾಪಕ ಬೇಲಾ ಮೀನಾ, ಕಾಮಗಾರಿ ನಿರ್ಮಾಣ ವಿಭಾಗದ ಸಿಎಒ ಅಜಯ್ ಶರ್ಮಾ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಹಾಲಪ್ಪ ಆಚಾರ್, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಕೆ.ಶರಣ್ಣಪ್ಪ, ಬವರಾಜ ದಢೇಸೂಗೂರು, ಮುಖಂಡರಾದ ಡಾ.ಕೆ.ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

‘ಶೀಘ್ರದಲ್ಲೇ 50 ವಂದೇ ಭಾರತ್ ಸ್ಲೀಪರ್ ರೈಲು’ : 

ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಿದರೆ, ನರೇಂದ್ರ ಮೋದಿ ರೈಲ್ವೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಹತ್ತು ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ರೈಲ್ವೆ ಯೋಜನೆಯನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ. 2014 ರಿಂದ 2024ರವರೆಗೆ ರೈಲ್ವೆ ಇಲಾಖೆಯಲ್ಲಿ 5 ಲಕ್ಷ ಉದ್ಯೋಗ ನೀಡಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕರ್ನಾಟಕದವರಿಗೆ ಉದ್ಯೋಗ ಸಿಗಲು ಅನುಕೂಲವಾಗಲು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. 50 ವಂದೇ ಭಾರತ್ ಸ್ಲೀಪರ್ ಕೋಚ್ ಟ್ರೈನ್‌ಗಳನ್ನು ಇನ್ನೂ ಒಂದುವರೆ ತಿಂಗಳಲ್ಲಿ ದೇಶಾದ್ಯಂತ ಬಿಡುಗಡೆ ಮಾಡಲಿದ್ದೇವೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News