×
Ad

ಆ.15ರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಹೋರಾಟ: ಸಂಸದ ಗೋವಿಂದ ಕಾರಜೋಳ

Update: 2025-07-20 18:32 IST

ಗೋವಿಂದ ಕಾರಜೋಳ್ 

ಕೊಪ್ಪಳ: ಆಗಸ್ಟ15ರ ಒಳಗಾಗಿ ಒಳಮಿಸಲಾತಿ ಜಾರಿ ಮಾಡಬೇಕು ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರವನ್ನು ಆಡಳಿತ ಮಾದುವುದಕ್ಕೆ ಬಿಡುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ್ ಅವರು ಹೇಳಿದರು.

ಭಾನುವಾರ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಈ ದೇಶದಲ್ಲಿ ದಲಿತರು ಮಲಮೂತ್ರವನ್ನು ತಲೆಯ ಮೇಲೆ ಹೊತ್ತು ಹೋಗುವ ಪದ್ದತಿ ಇತ್ತು, ಗಟಾರ್ ಸ್ವಚ್ಚಮಾಡುವ ಪದ್ಧತಿ ಇತ್ತು. ಕಸಗೂಡಿಸುವ, ಚಪ್ಪಲಿ ಹೊಲಿಯುವ ಕೆಲಸ ಅಸ್ಪೃಶ್ಯರು ಮಾಡುತ್ತಿದ್ದರು, ಇವರನ್ನು ಮೇಲೆತ್ತುವ ಕೆಲಸ ನಮ್ಮ ಪೂರ್ವಜರು ಸಂವಿಧಾನ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಅಸ್ಪೃಶ್ಯ ಜನಾಂಗಕ್ಕೆ ಉದ್ಯೋಗ, ಶಿಕ್ಷಣ, ರಾಜಕೀಯ ಮೀಸಲಾತಿ ಕೊಡುವ ಅಧಿಕಾರ ಸಂವಿಧಾನದಲ್ಲಿದೆ. 1950ರಲ್ಲಿ ಎಸ್ಸಿ ಮೀಸಲಾತಿ ಮಾಡಲಾಯಿತು, ಎಸ್ಸಿ ಸಮುದಾಯದಲ್ಲಿ ಆರು ಜಾತಿ, ಎಸ್ಟಿ ಸಮುದಾಯದಲ್ಲಿ ಆರು ಜಾತಿ ಇದ್ದವು, ಇಂದು ಎಸ್ಸಿ ಸಮುದಾಯದಲ್ಲಿ 101 ಜಾತಿ ಇವೆ, ಎಸ್ಟಿ ಸಮುದಾಯದಲ್ಲಿ 56 ಜಾತಿಗಳಿವೆ ಹೀಗಾಗಿ ಕೆಲವು ಸಮುದಾಯಗಳನ್ನು ಪೈಪೋಟಿ ಮಾಡುವ ಶಕ್ತಿ ಅಸ್ಪಶ್ಯರಿಗೆ ಇಲ್ಲದಂತ್ತಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯಲ್ಲೇ ಒಳಮೀಸಲಾತಿ ಕೊಡಬೇಕೆಂದು ಕಳೆದ 30 ವರ್ಷಗಳಿಂದ ಅಸ್ಪೃಶ್ಯ ಜಾತಿಗಳು ಮಾಡುತ್ತಿವೆ. ಈ ಹಿನ್ನೆಲೆ ಸದಾಶಿವ ಆಯೋಗ ರಚನೆ ಆಗಿದೆ, ವರದಿ ಕೂಡ ಕೊಡಲಾಗಿದೆ. ಸಿದ್ದರಾಮಯ್ಯ ಅವರು 2013-18ರವರೆಗೆ ಸಿಎಂ ಆಗಿ ಇದ್ದರೂ, ಒಳ ಮೀಸಲಾತಿ ಜಾರಿ ಮಾಡಲಿಲ್ಲ. 2023ರ ಚುನಾವಣೆಯಲ್ಲಿ ಇದೇ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಸೇರಿಸಿದರು. ಗೆದ್ದ ಕೂಡಲೇ ಅಧಿವೇಶನ ಹಾಗೂ ಮೊದಲ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದರು, ಎರಡು ವರ್ಷ ಆಯ್ತು ಒಳಮೀಸಲಾತಿ ಜಾರಿ ಮಾಡಿಲ್ಲ. ಅಸ್ಪೃಶ್ಯರಿಗೆ ನ್ಯಾಯ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಆಗಸ್ಟ್ 15ರೊಳಗೆ ಒಳಮೀಸಲಾತಿ ಜಾರಿ ಮಾಡಬೇಕು, ಅಗಸ್ಟ್ 11ರಿಂದ ಅಧಿವೇಶನ ಆರಂಭವಾಗುತ್ತೆ, ಇದೇ ಅಧಿವೇಶನದಲ್ಲಿ ಜಾರಿ ಮಾಡಬೇಕು ಡೇಟಾ ಇಲ್ಲ ಎಂದು ಕುಂಟು ನೆಪ ಹೇಳಬೇಡಿ, ಸದಾಶಿವ ಆಯೋಗದ ವರದಿ ಅತ್ಯಂತ ಶಾಸನಬದ್ಧವಾಗಿ ವರದಿಯಾಗಿದೆ. ಇದನ್ನು ಜಾರಿ ಮಾಡಬೇಕು ಎಂದು ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸವರಾಜ ದಡೆಸುಗೂರ್, ಹನುಮಂತಪ್ಪ ಬಳ್ಳಾರಿ, ಬಲ್ಲಾಹುನಿಸಿ ರಾಮಣ್ಣ, ಗಣೇಶ್ ಹೊರತಟ್ನಾಳ, ಪರಶುರಾಮ ಗಂಗಾವತಿ, ಮಹಾಲಕ್ಷ್ಮಿ ಕಂದಾರಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News