ಅಂಗನವಾಡಿಯಲ್ಲೂ ಇನ್ನು ಮುಂದೆ ಎಲ್‌ಕೆಜಿ, ಯುಕೆಜಿ
ಉಳ್ಳಾಲ: ಶಿಕ್ಷಣದ ಅಡಿಪಾಯ ಹಾಕುವ ಅಂಗನವಾಡಿ ಶಿಕ್ಷಣ ಕೇಂದ್ರಗಳು ಈಗ ಮತ್ತೊಂದು ಮೈಲಿಗಲ್ಲು ದಾಟುತ್ತಿದೆ. ಪಠ್ಯ ಮುಕ್ತ ಶಿಕ್ಷಣ ಕೇಂದ್ರ ಆಗಿರುವ ಅಂಗನವಾಡಿಗಳಲ್ಲಿ ಮುಂದಿನ ತಿಂಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸರಕಾರ ಅಸ್ತು ಅಂದಿದೆ. ಈ ಹಿನ್ನೆಲೆಯಲ್ಲಿ ಆಂಗ್ಲ ಶಿಕ್ಷಣ ಬೋಧಿಸಲು ಕಾರ್ಯಕರ್ತರಿಗೆ ತರಬೇತಿ ನಡೆಯುತ್ತಿದೆ. ಮೂರು ವರ್ಷಗಳ ಅವಧಿಯ ಈ ಅಂಗನವಾಡಿ ಶಿಕ್ಷಣ ಮೊದಲ ಒಂದು ಅವಧಿಯಲ್ಲಿ ನರ್ಸರಿ ಮಾದರಿಯಲ್ಲಿ ಶಿಕ್ಷಣ ನೀಡಲಿದ್ದು, ಉಳಿದ ಎರಡು ಅವಧಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ನಡೆಯಲಿದೆ.
ದ.ಕ.ಜಿಲ್ಲೆಯಲ್ಲಿರುವ 2,131 ಅಂಗನವಾಡಿಗಳ ಪೈಕಿ 70 ಅಂಗನವಾಡಿಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಲು ಈಗಾಗಲೇ ಸಿದ್ಧತೆ ನಡೆದಿದ್ದು, ಇದಕ್ಕೆ ಬೇಕಾದ ಪಠ್ಯ ಪುಸ್ತಕ ಪೂರೈಕೆ ಕೂಡಾ ಆಗಿದೆ. ಈ ಪಟ್ಟಿಯಲ್ಲಿ ಉಳ್ಳಾಲ ತಾಲೂಕಿನಿಂದ ಐದು, ಮುಲ್ಕಿಯ ಐದು, ಮೂಡುಬಿದಿರೆಯ ಐದು ಹಾಗೂ ಮಂಗಳೂರು ತಾಲೂಕಿನಿಂದ ಐದು ಅಂಗನವಾಡಿ ಕೇಂದ್ರಗಳು ಆಯ್ಕೆಯಾಗಿವೆ.
ಜಿಲ್ಲೆಯ 2,131 ಅಂಗನವಾಡಿಗಳ ಪೈಕಿ 1,384 ಅಂಗನವಾಡಿಗಳು ಈಗಾಗಲೇ ಸಕ್ಷಮ ಅಂಗನವಾಡಿ ಕೇಂದ್ರ ಪಟ್ಟಿಗೆ ಸೇರಿಕೊಂಡಿದೆ. ಈ ಪಟ್ಟಿಯಲ್ಲಿರುವ ಅಂಗನವಾಡಿಗಳು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯಲಿದ್ದು, ಸ್ಮಾರ್ಟ್ ಟಿವಿ ಕುಡಿಯುವ ನೀರು, ಕಿಚನ್ ಗಾರ್ಡನ್, ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಪೈಕಿ ಸ್ಮಾರ್ಟ್ ಟಿವಿ ಈಗಾಗಲೇ ಅಂಗನವಾಡಿಗೆ ಒದಗಿಸಲಾಗಿದೆ.
ಜಿಲ್ಲೆಯಲ್ಲಿರುವ ಒಟ್ಟು ಅಂಗನವಾಡಿಗಳ ಪೈಕಿ 1,925 ಅಂಗನವಾಡಿಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿದೆ. 30 ಅಂಗನವಾಡಿಗಳ ಕಟ್ಟಡ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, 50 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಏಳು ಅಂಗನವಾಡಿಗಳು ಶಾಲೆ ಹಾಗೂ ಸಮುದಾಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
27 ಕಾರ್ಯಕರ್ತೆಯರು, 177 ಸಹಾಯಕರು ಹಾಗೂ 20 ಮೇಲ್ವಿಚಾರಕರ ಹುದ್ದೆ ಖಾಲಿ ಉಳಿದಿದ್ದು, ನೇಮಕಾತಿ ಪ್ರಕ್ರಿಯೆ ಇನ್ನೂ ಆಗಬೇಕಾಗಿದೆ. ಅಲ್ಲದೆ ಮಂಗಳೂರು ಸಿಡಿಪಿಒ ಕಚೇರಿಯಲ್ಲಿ ಲೆಕ್ಕ ಪತ್ರ ವಿಭಾಗದ ಸಹಾಯಕರು ಐದು, ಅಟೆಂಡರ್ ಎರಡು, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಎರಡು ಹುದ್ದೆಗಳು ಖಾಲಿ ಉಳಿದಿವೆ.
1975ರಲ್ಲಿ ಚಾಲನೆ: 1975ರಲ್ಲಿ 100 ಅಂಗನವಾಡಿ ಆರಂಭಿಸುವುದರೊಂದಿಗೆ ಅಂಗನವಾಡಿಗೆ ಸರಕಾರ ಚಾಲನೆ ನೀಡಿತ್ತು. ಮೂರು ವರ್ಷ ಮೀರಿದ ಮಕ್ಕಳು ಮನೆಯಲ್ಲಿ ಕುಳಿತುಕೊಳ್ಳುವ ಬದಲು ಅವರಿಗೆ ಅಂಗನವಾಡಿಯಲ್ಲಿ ದಿನಕ್ಕೊಂದು ವಿಷಯಕ್ಕೆ ಸಂಬಂಧಿಸಿ ಪಾಠದ ಜತೆ ಆಟ ಎಂಬ ರೀತಿಯಲ್ಲಿ ಪಠ್ಯ ರಹಿತ ಶಿಕ್ಷಣ ಆರಂಭಿಸಲಾಗಿತ್ತು. ಈ ಶಿಕ್ಷಣ ಮುಂದುವರಿಯುತ್ತಾ ಬಂದಿದ್ದು, ಇದೀಗ ರಾಜ್ಯದಲ್ಲಿ 65,753 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿದೆ.
ಉಳ್ಳಾಲ ತಾಲೂಕು: ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ 133 ಅಂಗನವಾಡಿಗಳಿದ್ದು, ಈ ಪೈಕಿ 101 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಒಂದು ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿದ್ದು, 30 ಅಂಗನವಾಡಿಗಳು ಸಂಘ ಸಂಸ್ಥೆಗಳ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 29 ಕಟ್ಟಡಗಳಿಗೆ ಸ್ವಂತ ನಿವೇಶನ ಕೂಡ ಇಲ್ಲ. ಹೊಸದಾಗಿ ಮಂಜೂರು ಆಗಿರುವ 11 ಅಂಗನವಾಡಿ ಕಟ್ಟಡಗಳಿಗೂ ನಿವೇಶನ ಆಗಬೇಕು. 95 ಅಂಗನವಾಡಿಗಳಲ್ಲಿ ಟಿವಿ ಅಳವಡಿಕೆ ಪೂರ್ಣಗೊಂಡಿದೆ. ಆರು ಕಾರ್ಯಕರ್ತೆಯರು, 20 ಸಹಾಯಕರು, ಐದು ಮೇಲ್ವಿಚಾರಕರ ಪೈಕಿ ಎರಡು ಹುದ್ದೆ ಖಾಲಿ ಇವೆ. ಉಳ್ಳಾಲ, ಕೋಟೆಕಾರ್ ಹಾಗೂ ಬೀರಿಗೆ ಮಾತ್ರ ಮೇಲ್ವಿಚಾರಕರು ಇದ್ದಾರೆ. ಇದರಿಂದ ಕೆಲವು ಸಿಬ್ಬಂದಿಗೆ ಎರಡೆರಡು ಜವಾಬ್ದಾರಿ ವಹಿಸಲಾಗಿದೆ.
ತಾಲೂಕು ವ್ಯಾಪ್ತಿಯ ಕೋಟೆಕಾರ್ ವಲಯದ ತಲಪಾಡಿ ಫಟ್ನ, ಪೆರ್ಮನ್ನೂರು ವಲಯದ ಕುತ್ತಾರ್ ಪದವು, ಕೊಣಾಜೆ ವಲಯದ ಅಸೈ ಮದಕ, ಉಳ್ಳಾಲ ವಲಯದ ಧರ್ಮನಗರ ಹಾಗೂ ಬೋಳಿಯಾರ್ ವಲಯದ ಮದಕ ಅಂಗನವಾಡಿ ಕೇಂದ್ರಗಳು ಮಾತ್ರ ಎಲ್‌ಕೆಜಿ, ಯುಕೆಜಿ ಆರಂಭಿಸಲು ಆಯ್ಕೆಗೊಂಡಿವೆ. ಉಳಿದ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸರಕಾರ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಆಯ್ಕೆ ಗೊಂಡ ಅಂಗನವಾಡಿಗಳಲ್ಲಿ ಮುಂದಿನ ತಿಂಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಗೊಳ್ಳಲಿದೆ.
ಸಿಡಿಪಿಒ ಕಚೇರಿ ಇಲ್ಲ: ಉಳ್ಳಾಲ ತಾಲೂಕಿನಲ್ಲಿ ಸಿಡಿಪಿಒ ಕಚೇರಿ ಇನ್ನೂ ತೆರೆದಿಲ್ಲ. ಈ ಕಾರಣದಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮೇಲ್ವಿಚಾರಕರು ಉರ್ವ ಮಾರ್ಕೆಟ್ ಕಟ್ಟಡದಲ್ಲಿ ಇರುವ ಸಿಡಿಪಿಒ ಕಚೇರಿಗೆ ತೆರಳಿ ಲೆಕ್ಕ ಪತ್ರ ಒದಗಿಸಬೇಕಾಗಿದೆ. ಉಳ್ಳಾಲದಲ್ಲಿ ಕಚೇರಿ ತೆರೆದರೆೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಇಲ್ಲಿಂದಲೇ ಲೆಕ್ಕ ಪತ್ರ, ವರದಿ ರವಾನಿಸಲು ಸಾಧ್ಯ ಆಗುತ್ತದೆ ಎಂಬುದು ಇಲ್ಲಿನ ಮೇಲ್ವಿಚಾರಕರ ಅಭಿಪ್ರಾಯ.
ವಿದ್ಯಾರ್ಥಿಗಳ ಸಂಖ್ಯೆ: 2020ರಲ್ಲಿ ಅಂಗನವಾಡಿಯಲ್ಲಿ 11,617 ವಿದ್ಯಾರ್ಥಿಗಳು ಇದ್ದರೆ, 2022ರಲ್ಲಿ ಅದು 12,385 ಏರಿಕೆ ಆಗಿತ್ತು. 2025ರಲ್ಲಿ ಈ ಸಂಖ್ಯೆ 11,354ಕ್ಕೆ ಇಳಿದಿದೆ.
ಅಂಗನವಾಡಿಯಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸುವುದು ಉತ್ತಮ ಯೋಜನೆ. ಇದಕ್ಕೆ ನನ್ನ ಕ್ಷೇತ್ರದಿಂದ ಐದು ಅಂಗನವಾಡಿಗಳು ಆಯ್ಕೆ ಆಗಿದ್ದು, ಕಾರ್ಯಕರ್ತೆಯರ ನೇಮಕಕ್ಕೆ ಸಿದ್ಧತೆ ನಡೆಯುತ್ತಿದೆ. ಅಂಗನವಾಡಿಯ ಸಿಬ್ಬಂದಿ ಕೊರತೆ ಪರಿಹರಿಸುವುದು ಸರಕಾರದ ಜವಾಬ್ದಾರಿ. ಈ ವಿಚಾರದಲ್ಲಿ ಸರಕಾರದ ಗಮನಕ್ಕೆ ತರುತ್ತೇನೆ. ಉಳ್ಳಾಲ ತಾಲೂಕಿನಲ್ಲಿ ಸಿಡಿಪಿಒ ಕಚೇರಿಗೆ ಈವರೆಗೆ ಬೇಡಿಕೆ ಬಂದಿಲ್ಲ. ಇದೀಗ ಉಳ್ಳಾಲ ತಾಲೂಕು ಆಗಿರುವ ಕಾರಣ ಸಿಡಿಪಿಒ ಕಚೇರಿ ವ್ಯವಸ್ಥೆ ಮಾಡಲಾಗುವುದು. ನಿವೇಶನ ಇಲ್ಲದ ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಸರಕಾರಿ ನಿವೇಶನ ಸ್ಥಳೀಯ ಜನಪ್ರತಿನಿಧಿಗಳು ಗುರುತಿಸಬೇಕು. ಸ್ಥಳೀಯರು ಈ ವಿಚಾರದಲ್ಲಿ ಕೈಜೋಡಿಸಬೇಕು.
| ಯು.ಟಿ.ಖಾದರ್, ಸ್ಪೀಕರ್
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಾಲ್ಕು ತಾಲೂಕುಗಳಲ್ಲಿ 20 ಅಂಗನವಾಡಿಗಳಲ್ಲಿ ಆರಂಭ ಹಂತದಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭವಾಗಲಿದೆ. ಇದಕ್ಕಾಗಿ ಕಾರ್ಯಕರ್ತರಿಗೆ ತರಬೇತಿ ಕೂಡ ನೀಡಲಾಗುತ್ತದೆ. ಉಳ್ಳಾಲ ತಾಲೂಕಿನಲ್ಲಿ 5 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಅವಕಾಶ ಸಿಕ್ಕಿದೆ.
| ಶೈಲಾ ಕೆ. ಕಾರಿಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಗೊಂಡರೆ ವಿದ್ಯಾರ್ಥಿ ಗಳ ಸಂಖ್ಯೆ ಜಾಸ್ತಿ ಆಗಲಿದೆ. ಈಗಾಗಲೇ ಆಂಗ್ಲ ಮಾಧ್ಯಮ ಶಾಲೆಯತ್ತ ವಿದ್ಯಾರ್ಥಿಗಳ ಒಲವು ಜಾಸ್ತಿ ಇರುವುದರಿಂದ ಸರಕಾರದ ಈ ಯೋಜನೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಪ್ರೇರಣೆ ನೀಡಿದಂತಾ ಗುತ್ತದೆ. ಇದರಿಂದ ಕನ್ನಡ ಮಾಧ್ಯಮ ಶಾಲೆ ಗಳನ್ನು ಉಳಿಸಲು ಸಾಧ್ಯ ಆಗುತ್ತದೆ.ಸರಕಾರ ಈ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಆದ್ಯತೆ ನೀಡಿದರೆ ಗ್ರಾಮೀಣ ಭಾಗದ ಸಮಸ್ಯೆ ಇತ್ಯರ್ಥ ಆಗುತ್ತದೆ.
| ಮುಸ್ತಫ ಮಲಾರ್, ಮಾಜಿ ತಾಪಂ ಸದಸ್ಯ
ಸರಕಾರ ಜಾರಿ ಮಾಡಿರುವ ಯೋಜನೆ ಉತ್ತಮವಾದುದು. ಆಂಗ್ಲ ಶಿಕ್ಷಣ ಅಂಗನವಾಡಿ ಯಿಂದಲೇ ಆರಂಭವಾದರೆ ಮಕ್ಕಳಿಗೆ ಸುಲಭ ಆಗುತ್ತದೆ. ಆದರೆ ಈ ಶಿಕ್ಷಣ ವಿದ್ಯಾರ್ಥಿಗಳಿಗೆ ಹೊರೆ ಆಗಬಾರದು. ಒತ್ತಡದ ಕಲಿಕೆ ಕೂಡ ಆಗಬಾರದು.
| ಮುಹಮ್ಮದ್ ಕುಂಞಿ, ಖತೀಬ್, ಮಸ್ಜಿದುಲ್ ಹುದಾ