Mandya | ನೇಣುಬಿಗಿದ ಸ್ಥಿತಿಯಲ್ಲಿ ತಾಯಿ, ಮಗಳ ಮೃತದೇಹ ಪತ್ತೆ
ಮಂಡ್ಯ : ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ, ಮಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಗ್ರಾಮದ ಮಹೇಶ ಎಂಬವರ ಪತ್ನಿ ಶಕುಂತಲಾದೇವಿ (46) ಹಾಗೂ ಪುತ್ರಿ ಪ್ರಿಯಾಂಕಾ (19) ಅವರ ಮೃತದೇಹಗಳು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪಕ್ಕದ ಮನೆಯವನ ಬೆದರಿಕೆ ಹಾಗೂ ಕಿರುಕುಳದಿಂದ ಬೇಸತ್ತು ಪತ್ನಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಕುಂತಲಾ ಪತಿ ಮಹೇಶ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಮಗಳಾದ ಪ್ರಿಯಾಂಕಳಿಗೆ ಮದುವೆ ಮಾಡುವ ಸಿದ್ದತೆಯಲ್ಲಿ ನಮ್ಮ ಕುಟುಂಬ ತೊಡಗಿರುವಾಗ ಪಕ್ಕದ ಮನೆಯ ಮುತ್ತುರಾಜ್ ಎಂಬಾತ ಮದುವೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತ ಕಿರುಕಳ ನೀಡುತ್ತಿದ್ದ ಇದರಿಂದ ಮನನೊಂದು ತಾಯಿ, ಮಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹೇಶ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.