ಪ್ರಜ್ವಲ್ ರೇವಣ್ಣ ಜೈಲು ಸೇರಲು ಕುಮಾರಸ್ವಾಮಿ ಕಾರಣ : ಕೆ.ಎಂ.ಉದಯ
ಮಂಡ್ಯ : ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಮದ್ದೂರು ಶಾಸಕ ಕೆ.ಎಂ.ಉದಯ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರನ್ನು ಜನ 3 ಬಾರಿ ತಿರಸ್ಕರಿದ್ದಾರೆ. ಅವರು ಏನೂ ಆಗಲಿಲ್ಲವಲ್ಲ ಎಂಬ ಕಾರಣಕ್ಕೆ ಅವರ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಅವರನ್ನೇ ಕುಮಾರಸ್ವಾಮಿ ಜೈಲಿಗೆ ಹಾಕಿಸಿದರು ಎಂದು ಆಪಾದಿಸಿದರು.
ಪ್ರಜ್ವಲ್ ಜನಪ್ರಿಯತೆ ಸಹಿಸದೆ ಕುಮಾರಸ್ವಾಮಿ ಅವರು ಚುನಾವಣಾ ವೇಳೆ ಪೆನ್ ಡ್ರೈವ್‌ಗಳನ್ನು ಸೃಷ್ಟಿಸಿ ಜೈಲಿಗೆ ಹಾಕಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಮನಸು ಮಾಡಿದ್ದರೆ ಹೊರಗೆ ತರಬಹುದಿತ್ತು. ಆದರೆ, ಕುಮಾರಸ್ವಾಮಿ ಒತ್ತಡದಿಂದ ಪ್ರಜ್ವಲ್ ರೇವಣ್ಣ ಜೈಲಿನಿಂದ ಹೊರ ಬರಲು ಆಗುತ್ತಿಲ್ಲ ಎಂದರು.
ಮದ್ದೂರು ನಗರಸಭೆಗೆ ಗೆಜ್ಜಲಗೆರೆ, ಸೋಮನಹಳ್ಳಿ, ಗೊರವನಹಳ್ಳಿ ಗ್ರಾಮ ಪಂಚಾಯತ್ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಧರಣಿಗೆ ಕುಮಾರಸ್ವಾಮಿ ಬೆಂಬಲಿಸಿ ಗೆಜ್ಜಲಗೆರೆಯ ಜನರನ್ನು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವುದು ಎಷ್ಟು ಸರಿ? ಎಂದು ಉದಯ ಪ್ರಶ್ನಿಸಿದರು.
ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರೆ, ಕುಮಾರಸ್ವಾಮಿ ಅವರು ಗ್ರಾಮೀಣ ಪ್ರದೇಶಗಳು ಉಳಿಯಬೇಕು ನಗರೀಕರಣ ಆಗಬಾರದೆಂದು ಇಲ್ಲಿ ಬಂದು ಗೆಜ್ಜಲಗೆರೆಯ ಜನರನ್ನು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವುದು ಸರಿಯೇ ಎಂದು ಅವರು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವರಾಗಿ ಅವರ ಸಾಧನೆ ಶೂನ್ಯ. ಎರಡು ವರ್ಷಗಳ ಅವಧಿಯಲ್ಲಿ ಸಿಎಸ್ ಆರ್, ಎಂಪಿ ಅನುದಾನದಲ್ಲಿ ಬಸ್ ನಿಲ್ದಾಣ, ಆಟೋ ನಿಲ್ದಾಣ ಮಾಡಿರುವುದೇ ಕೇಂದ್ರ ಸಚಿವರ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.
ಲೋಕಸಭಾ ಸದಸ್ಯನಾದ 5 ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಚರ್ಚಿಸಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಚುನಾವಣಾ ಪ್ರಚಾರದಲ್ಲಿ ಕುಮಾರಸ್ವಾಮಿ ಜಿಲ್ಲೆಯ ಜನತೆಗೆ ವಾಗ್ದಾನ ಕೊಟ್ಟಿದ್ದರು. ಆದರೆ, ಅದರಂತೆ ನಡೆದುಕೊಳ್ಳಲಿಲ್ಲ. ಎರಡು ಬಾರಿ ಸಿಎಂ ಆಗಿದ್ದರೂ ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ.
-ಕೆ.ಎಂ.ಉದಯ, ಮದ್ದೂರು ಕಾಂಗ್ರೆಸ್ ಶಾಸಕ