ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು!
ರಾಷ್ಟ್ರೀಯ ಹೆದ್ದಾರಿ ಇಲ್ಲಿ ಕೇವಲ ಭೌಗೋಳಿಕ ಸೀಳುವಿಕೆಯನ್ನು ಮಾಡಿಲ್ಲ; ಬೌದ್ಧಿಕ ಸ್ಮತಿಯನ್ನೂ, ಭಾವನಾತ್ಮಕ ಸಂಬಂಧವನ್ನೂ, ಆರ್ಥಿಕ ಬದುಕನ್ನೂ ಒಂದೇ ವೇಳೆ ಕತ್ತರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ದೂರವನ್ನು ಕಡಿಮೆ ಮಾಡಿದ್ದೇವೆ, ಆದರೆ ನೆನಪುಗಳ ನಡುವಿನ ಸೇತುವೆಯನ್ನು ಕಳೆದುಕೊಂಡಿದ್ದೇವೆ. ಫ್ಲೈಓವರ್ ಮೇಲೆ ನಿಂತು ನೋಡಿದರೆ ದೇಶ ಮುಂದಕ್ಕೆ ಹೋಗುತ್ತಿರುವಂತೆ ಕಾಣುತ್ತದೆ; ಅದರ ಕೆಳಗಡೆ ಇರುವ ಹಳ್ಳಿಗಳ ಹಳ್ಳಿತನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ದಿನೇ ದಿನೇ ಕೆಳಗೆ ನಿಧಾನವಾಗಿ ಮರೆತು ಹೋಗುತ್ತಿರುವ ಊರುಗಳ ಕಥೆ ಯಾರಿಗೂ ಕಾಣಿಸದೇ ಹೋಗುತ್ತಿದೆ.
ಒಂದು ಕೃಷಿ ಪ್ರಧಾನ ಹಳ್ಳಿಯನ್ನು ಸೀಳಿ ಸಾಗುವ ರಾಷ್ಟ್ರೀಯ ಹೆದ್ದಾರಿ ಆ ಕ್ಷಣದಿಂದಲೇ ಭೌಗೋಳಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆ ಊರನ್ನು ಇಬ್ಭಾಗ ಮಾಡುತ್ತದೆ. ನಕ್ಷೆಯಲ್ಲಿ ಮಾತ್ರ ಅದು ಕಣ್ಣಿಗೆ ಕಾಣಿಸುವ ನೇರವಾದ ಸರಳ ಗೀರು. ಆದರೆ ಅಲ್ಲಿ ಬದುಕುವ ನೆಲದವರ ಬದುಕಿನಲ್ಲಿ ಅದು ತಿರುವು, ತಲ್ಲಣ, ತುಂಡಾಗುವ ನೆನಪು. ನಿನ್ನೆಯವರೆಗೆ ಮನೆಯ ಬಾಗಿಲಿನಿಂದ ನೇರವಾಗಿ ಕಾಲಿಟ್ಟರೆ ತಲುಪುತ್ತಿದ್ದ ಹೊಲ, ಪಂಚಾಯಿತಿ ಕಟ್ಟೆ, ಗೂಡಂಗಡಿ, ಗಡಂಗು, ಮೀನಿನ ಅಂಗಡಿ, ಪ್ರೈಮರಿ ಶಾಲೆ ಎಲ್ಲವೂ ಇಂದು ಹೆದ್ದಾರಿಯ ಆ ಬದಿಯದು!
ಬೆಳಗಿನ ಜಾವ ಹಸುವನ್ನು ಬಿಟ್ಟುಕೊಂಡು, ಬೀಜದ ಮೂಟೆ ಹೆಗಲಿಗೇರಿಸಿಕೊಂಡು ನಡೆದು ಹೋಗುತ್ತಿದ್ದ ದಾರಿ ಇದ್ದಕ್ಕಿದ್ದಂತೆ ಕತ್ತರಿಸಿಬಿಟ್ಟಿದೆ.
ಅಂಡರ್ ಪಾಸ್ ಇಲ್ಲ, ಸರ್ವಿಸ್ ರೋಡ್ ಬಹುದೂರ. ಪರಿಣಾಮವಾಗಿ ರೈತನು ತನ್ನದೇ ಹೊಲಕ್ಕೆ ಹೋಗಲು ಮೈಲುಗಟ್ಟಲೆ ಸುತ್ತು ಹೊಡೆಯಬೇಕು. ಆ ಸುತ್ತು ಬರೀ ಕೇವಲ ದೈಹಿಕ ದೂರವಲ್ಲ; ಯಾರದೋ ಹಸು ಪೈರು ಮೇಯುತ್ತಿದ್ದರೂ ಅದನ್ನು ಓಡಿಸಲಾರದ ಸ್ಥಿತಿ. ಸಮಯದ ನಷ್ಟ, ಶ್ರಮದ ನಷ್ಟ, ಹಣದ ನಷ್ಟ. ಒಂದು ದಿನಕ್ಕೆ ಒಂದು ಗಂಟೆ ಹೆಚ್ಚಾಗಿ ನಡೆದು ಹೋಗುವುದು ಎಂದರೆ ಆ ಹೊಲಕ್ಕೆ ಕೊಡುವ ಗಮನ ಸಹಜವಾಗಿಯೇ ಕಡಿಮೆಯಾಗುತ್ತದೆ. ನೀರಾವರಿಯ ಸಮಯ ತಪ್ಪುತ್ತದೆ, ಬೆಳೆ ನೋಡಿಕೊಳ್ಳುವ ನಿಕಟತೆ ಕಡಿಮೆಯಾಗುತ್ತದೆ. ಇದರಿಂದ ಉತ್ಪಾದನೆ ಕುಸಿಯುತ್ತದೆ. ಕುಸಿತದ ಜೊತೆ ಸಾಲದ ನೆರಳು ದಟ್ಟವಾಗುತ್ತದೆ.
ಆರ್ಥಿಕ ನಷ್ಟಕ್ಕಿಂತ ಆಳವಾದದ್ದು ಭಾವನಾತ್ಮಕ ನಷ್ಟ. ‘ನನ್ನ ಹೊಲ’ ಎಂಬ ತಲೆತಲಾಂತರದ ಸಂಬಂಧದ ನಡುವೆಯೇ ದುತ್ತನೆ ಹೆದ್ದಾರಿ ನಿಂತುಬಿಡುತ್ತದೆ. ಗದ್ದೆಯ ಆ ಬದಿಯಲ್ಲಿ ನಿಂತು ನೋಡಿದಾಗ ಎದುರಿಗೇ ಕಾಣುವ ಮನೆಯ ಬಾಗಿಲು ಈಗ ತಲುಪಲಾರದಷ್ಟು ದೂರವಾಗುತ್ತದೆ. ಹೊಲದಲ್ಲಿ ದುಡಿದು ಬೆವರು ಸುರಿಸಿದ ರೈತನಿಗೆ ಹೆದ್ದಾರಿಯ ಗದ್ದಲದ ನಡುವೆ ತನ್ನ ನೆಲದ ಧ್ವನಿ ಕೇಳಿಸದೇ ಹೋಗುತ್ತದೆ. ಹಳ್ಳಿಯೊಳಗಿನ ಸಹಜ ಪಿಸುಮಾತು, ಹರಟೆ, ಜೋಗುಳ, ಆಚರಣೆ, ಭೇಟಿ.... ಎಲ್ಲದಕ್ಕೂ ಆ ಹೆದ್ದಾರಿಯ ಅತಿವೇಗ ಹೊಂದಿಕೆಯಾಗುವುದಿಲ್ಲ.
ರಾಷ್ಟ್ರೀಯ ಹೆದ್ದಾರಿ ರೈತರಲ್ಲಿ ಮತ್ತೊಂದು ತಲ್ಲಣವನ್ನು ಹುಟ್ಟಿಸುತ್ತದೆ: ಭದ್ರತೆಯ ಭೀತಿ. ರಸ್ತೆ ದಾಟುವಾಗ ಹಸು, ಕುರಿ, ಕೋಳಿ, ಆಡು, ಮನುಷ್ಯ-ಎಲ್ಲರಿಗೂ ಅಪಾಯವೇ. ಅಲ್ಲಿಯ ಒಂದು ಅಪಘಾತ ಕೇವಲ ಒಂದು ಜೀವವನ್ನಷ್ಟೇ ಕಸಿದುಕೊಳ್ಳುವುದಲ್ಲ; ಒಂದು ಕುಟುಂಬದ ಆರ್ಥಿಕ ನೆಲೆಯನ್ನು ಕಿತ್ತುಹಾಕುತ್ತದೆ. ಪರಿಹಾರದ ಕಾಗದಗಳು ಬರುವಷ್ಟರಲ್ಲಿ ಬದುಕುಳಿದವರ ಬಾಳು ಬಚ್ಚಿಹೋಗುತ್ತದೆ.
ಹಳ್ಳಿಗುಂಟ ಸಾಗುವ ಹೆದ್ದಾರಿಯ ನಡುನಡುವೆ ಇರುವ ಫ್ಲೈಓವರ್ ದಾರಿಯನ್ನು ನೇರಗೊಳಿಸುತ್ತದೆ, ಪ್ರಯಾಣಿಕರನ್ನು ಎತ್ತರಕ್ಕೆ ಏರಿಸುತ್ತದೆ. ಯಾವುದೂ ಅಡ್ಡವಿಲ್ಲವೆಂದು ವಾಹನಗಳ ವೇಗ ತೀವ್ರಗೊಳ್ಳುತ್ತದೆ. ಮೇಲಿನಿಂದ ನೋಡಿದರೆ ಕೆಳಗಿನ ಊರು ಕೇವಲ ಒಂದು ನೆರಳು ಮಾತ್ರ. ಮೊನ್ನೆ ಮೊನ್ನೆ ನೋಡಿಕೊಂಡು ಹೋದ ಹಳ್ಳಿಗಳು ಈಗ ಗಮನಕ್ಕೇ ಬಾರದ ದೃಶ್ಯ. ಫ್ಲೈಓವರ್ ಮೇಲೆ ಚಲಿಸುವ ವಾಹನಗಳಿಗೆ ಕೆಳಗಿನ ಊರಿನ ಹೆಸರು ಗೊತ್ತಿಲ್ಲ, ಅದರ ಇತಿಹಾಸ ಗೊತ್ತಿಲ್ಲ, ಅಲ್ಲಿ ಇರುವ ದೇವರ ಗುಡಿ, ತೇರು, ಬಾವಿ, ಚರ್ಚ್, ಮಸೀದಿ, ದೈವದ ಕಟ್ಟೆ, ಭಜನಾ ಮಂದಿರ, ಜಾತ್ರೆ-ಯಾವುದಕ್ಕೂ ನೋಟವಿಲ್ಲ. ಹೀಗೆ ಹಳ್ಳಿ ಅಲ್ಲಿ ಕೇವಲ ಪಾಸ್ ಆಗುವ ಸ್ಥಳವಾಗುತ್ತದೆ; ತಲುಪಬೇಕಾದ ಊರು ಆಗುವುದಿಲ್ಲ.
ಇಲ್ಲಿಯೇ ಸಾಂಸ್ಕೃತಿಕ ಕೊರತೆ ಹುಟ್ಟುತ್ತದೆ. ಹಿಂದೆ ರಸ್ತೆ ಮೇಲೆ ಹಾದುಹೋಗುವವನು ಗಾಡಿ ನಿಲ್ಲಿಸಿ ಆಗಾಗ ಇಲ್ಲಿ ಚಹಾ ಕುಡಿಯುತ್ತಿದ್ದ, ಮಾತಾಡುತ್ತಿದ್ದ, ಹಳ್ಳಿಯ ಹೆಸರು ನೆನಪಿಟ್ಟುಕೊಳ್ಳುತ್ತಿದ್ದ. ಇಂದು ವೇಗವೇ ಅಲ್ಲಿ ಮೌಲ್ಯ. ವೇಗದ ಸಮಾಜದಲ್ಲಿ ಹಳ್ಳಿಯ ಕಥೆಗೆ ಜಾಗವೇ ಇರುವುದಿಲ್ಲ. ಇದರಿಂದ ಹಳ್ಳಿ ತನ್ನ ಗುರುತನ್ನು ನಿಧಾನವಾಗಿ ಕಳೆದುಕೊಳ್ಳುತ್ತದೆ. ಯುವಕರಂತೂ ಅದೇ ಹೆದ್ದಾರಿಯಲ್ಲಿ ನಿಂತ ಬೆಂಗಳೂರು ಕಡೆಗಿನ ಬಸ್ಸು ಹತ್ತುತ್ತಾರೆ; ಉಳಿದವರು ಹೆದ್ದಾರಿಯ ಶಬ್ದದ ನಡುವೆ ಮೌನವಾಗುತ್ತಾರೆ.
ಅಭಿವೃದ್ಧಿ ಬೇಕು, ರಸ್ತೆ ಬೇಕು ಅದರಲ್ಲಿ ಸಂದೇಹವೇ ಇಲ್ಲ. ಆದರೆ ಆ ಪ್ರಗತಿ ಹಳ್ಳಿಯ ಜೊತೆ ಮಾತನಾಡಿಕೊಂಡು ಹೊಂದಿಕೊಂಡು ಸಹಿಸಿಕೊಂಡು ಪಳಗಿಸಿಕೊಂಡು ಆಗಿದ್ದರೆ ಎಷ್ಟು ಚೆನ್ನಾಗಿತ್ತು. ವಶಪಡಿಸಿಕೊಂಡು ಉಳಿದ ಅರ್ಧ ಹೊಲಕ್ಕೆ ರೈತನಿಗೇ ದಾರಿ ಉಳಿಸಬೇಕಿತ್ತು. ಇಲ್ಲವಾದರೆ ಹೆದ್ದಾರಿ ದೇಶವನ್ನು ಜೋಡಿಸುವ ಬದಲು, ಹಳ್ಳಿಯ ಬದುಕನ್ನು ತುಂಡುಮಾಡುವ ಗೀರುವಷ್ಟೇ ಆಗುತ್ತದೆ.
ರಾಷ್ಟ್ರೀಯ ಹೆದ್ದಾರಿ ಒಂದು ಊರನ್ನು ಸೀಳಿ ಹೋದಾಗ ಆಗುವ ನಷ್ಟವನ್ನು ಅಂಕಿ-ಅಂಶಗಳಲ್ಲಿ ಹೇಳಬಹುದು. ಆದರೆ ಅದರ ನಿಜವಾದ ತೂಕ ಅರ್ಥವಾಗುವುದು ದೃಷ್ಟಾಂತಗಳ ಮೂಲಕವೇ. ಕರಾವಳಿ ಕಲ್ಲಡ್ಕದ ಲಕ್ಷ್ಮಿ ಕೆ.ಟಿ. ಹೋಟೆಲ್ ಅದಕ್ಕೆ ಸರಿಯಾದ ಉದಾಹರಣೆ. ಒಂದು ಕಾಲ ಇತ್ತು. ಬೆಂಗಳೂರು-ಮೈಸೂರು ಹಾದಿಯಲ್ಲಿ ಹೋಗುವವರಿಗೆಲ್ಲ ಕಲ್ಲಡ್ಕ ತಲುಪುವ ಮುನ್ನವೇ ಮನಸ್ಸಿನಲ್ಲಿ ಒಂದು ರುಚಿ ಎದ್ದುಕೊಳ್ಳುತ್ತಿತ್ತು. ‘‘ಇನ್ನೂ ಸ್ವಲ್ಪ ಮುಂದೆ ಕೆ.ಟಿ. ಇದೆ’’ ಅನ್ನುವ ವಾಕ್ಯವೇ ಪ್ರಯಾಣದ ಭಾಗವಾಗಿತ್ತು. ಗಾಡಿ ನಿಧಾನವಾಗುತ್ತಿತ್ತು, ಬದಿಗೆ ನಿಲ್ಲುತ್ತಿತ್ತು. ಚಹಾದ ಕಪ್ ಕೈಗೆ ಬರುವಷ್ಟರಲ್ಲಿ ಪಕ್ಕದ ಮೇಜಿನವರ ಜೊತೆ ಮಾತು ಶುರುವಾಗುತ್ತಿತ್ತು. ಕೆ.ಟಿ.ಯ ಸ್ವಾದ ಕೇವಲ ಹೊಟ್ಟೆ ತುಂಬುವ ಆಹಾರವಲ್ಲ; ಅದು ಒಂದು ರೀತಿ ಆ ಊರಿನ ಸ್ವಭಾವ, ಆತಿಥ್ಯ, ನೆನಪು. ಬರೀ ಕಲ್ಲಡ್ಕದ ಚಹಾ ಒಂದೇ ಅಲ್ಲ. ಅದು ಯಾವುದೋ ಊರಿನ ತಟ್ಟೆ ಇಡ್ಲಿ ಇರಬಹುದು. ನೀರು ದೋಸೆ ಇರಬಹುದು, ಕೋರಿ ರೊಟ್ಟಿ ಇರಬಹುದು. ಕಡ್ಲೆ ಬಜಿಲ್ ಇರಬಹುದು. ಒಂದು ಹೋಟೆಲ್, ಅಲ್ಲಿಯ ತಿಂಡಿ-ಅದು ಬರೀ ಹೋಟೆಲ್ ಗುರುತಲ್ಲ. ಒಂದು ಊರಿನ ಅಸ್ಮಿತೆಯೂ ಕೂಡ.
ಫ್ಲೈಓವರ್ ಎದ್ದು ನಿಂತಮೇಲೆ ವಾಹನಗಳ ವೇಗ ಹೆಚ್ಚಾಯಿತು. ಹಳೆ ತಲೆಮಾರಿನವರು ಇನ್ನೂ ಕೆಲವೊಮ್ಮೆ ಕೆಳಗಿಳಿದು ಕೆ.ಟಿ.ಗೆ, ತಟ್ಟೆ ಇಡ್ಲಿಗೆ, ನೀರು ದೋಸೆಗೆ ಹೋಗುತ್ತಾರೆ; ಅವರ ನೆನಪು ಇನ್ನೂ ಹಸಿರಾಗಿದೆ. ಆದರೆ ಹೊಸ ತಲೆಮಾರು? ಅವರು ಫ್ಲೈಓವರ್ ಮೇಲೆ ಸಾಗುತ್ತಾರೆ. ಕೆಳಗಿರುವ ಕೆ.ಟಿ. ಅವರಿಗೆ ಕಣ್ಣಿಗೆ ಬೀಳುವುದೇ ಇಲ್ಲ. ಸ್ವಾದ, ಸುವಾಸನೆ ಮೇಲಕ್ಕೆ ಏರುವುದಿಲ್ಲ. ನೆನಪು ಹುಟ್ಟುವ ಅವಕಾಶವೇ ಸಿಗುವುದಿಲ್ಲ. ಹೀಗಾಗಿ ರುಚಿ ನಿಧಾನವಾಗಿ ನೆನಪಿನಿಂದ ಹೊರಹೋಗುತ್ತದೆ. ಇದು ಕೇವಲ ಒಂದು ಹೋಟೆಲಿನ ನಷ್ಟವಲ್ಲ; ಒಂದು ಸಾಂಸ್ಕೃತಿಕ ಸಂಬಂಧದ ಕಳೆವು.
ಇದೇ ಕಥೆ ನಮ್ಮ ಚಹಾದ ಅಂಗಡಿಗಳದ್ದು, ಬೊಂಡದ ಅಂಗಡಿಗಳದ್ದು, ಬೀಡದ ಅಂಗಡಿಗಳದ್ದು. ರಸ್ತೆಯ ಪಕ್ಕದಲ್ಲಿ ನಿಂತು ಪ್ರಯಾಣಿಕರ ಜೊತೆ ಬದುಕುತ್ತಿದ್ದ ಅಂಗಡಿಗಳು ಇಂದು ಹೆದ್ದಾರಿಯ ಮಧ್ಯೆ ಸಿಕ್ಕಿಹಾಕಿಕೊಂಡಿವೆ. ಸಿಕ್ಕಿಹಾಕಿಕೊಳ್ಳುವುದು ಅಂದರೆ ಕೇವಲ ವ್ಯಾಪಾರ ಕಡಿಮೆಯಾಗುವುದು ಅಲ್ಲ; ಅವರ ಅಸ್ತಿತ್ವವೇ ಪ್ರಶ್ನೆಯಾಗುವುದು.
ಮಂಗಳೂರು ಕಡೆ ಚಲಿಸುವಾಗ ಕಲ್ಲಡ್ಕ, ಮೆಲ್ಕಾರು, ಪಾಣೆಮಂಗಳೂರು-ಒಂದು ಕಾಲದಲ್ಲಿ ನಮ್ಮ ಪ್ರಯಾಣದ ಗುರುತುಗಳು. ಹೆಸರು ಕೇಳಿದರೆ ಮುಖ ನೆನಪಾಗುತ್ತಿತ್ತು, ಮುಖ ನೆನಪಾದರೆ ರುಚಿ, ಮಾತು, ಜನ ನೆನಪಾಗುತ್ತಿದ್ದರು. ಗಾಡಿ ನಿಲ್ಲಿಸಿ ಚಹಾ ಕುಡಿದು, ಎರಡು ಮಾತು ಆಡಿಕೊಂಡು ಮುಂದೆ ಹೋಗುವುದು ಒಂದು ಸಂಸ್ಕೃತಿ. ಇಂದು ಕೇವಲ ಆರು ತಿಂಗಳಲ್ಲಿ ನಾವು ಆ ಊರುಗಳನ್ನು ಮರೆತುಬಿಟ್ಟಿದ್ದೇವೆ ಎಂದರೆ, ಅವುಗಳನ್ನು ನೋಡದೇ ಫ್ಲೈಓವರ್ ಮೇಲೆ ಸಾಗುವ ಹೊಸ ತಲೆಮಾರು ಆ ಊರುಗಳನ್ನು ನೆನಪಿಟ್ಟುಕೊಳ್ಳುವುದಾದರೂ ಹೇಗೆ?
ಊರು ನೆನಪಾಗಲು ಅದು ಕಣ್ಣಿಗೆ ಬೀಳಬೇಕು, ಕಾಲಿಗೆ ತಟ್ಟಬೇಕು, ನಾಲಿಗೆಗೆ ರುಚಿ ಕೊಡಬೇಕು, ಮನಸ್ಸಿಗೆ ಮಾತು ಕೊಡಬೇಕು. ವೇಗದ ರಸ್ತೆಯಲ್ಲಿ ಈ ಎಲ್ಲದಕ್ಕೂ ಈಗ ಸಮಯವೇ ಇಲ್ಲ.
ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಇಲ್ಲಿ ಕೇವಲ ಭೌಗೋಳಿಕ ಸೀಳುವಿಕೆಯನ್ನು ಮಾಡಿಲ್ಲ; ಬೌದ್ಧಿಕ ಸ್ಮತಿಯನ್ನೂ, ಭಾವನಾತ್ಮಕ ಸಂಬಂಧವನ್ನೂ, ಆರ್ಥಿಕ ಬದುಕನ್ನೂ ಒಂದೇ ವೇಳೆ ಕತ್ತರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ದೂರವನ್ನು ಕಡಿಮೆ ಮಾಡಿದ್ದೇವೆ, ಆದರೆ ನೆನಪುಗಳ ನಡುವಿನ ಸೇತುವೆಯನ್ನು ಕಳೆದುಕೊಂಡಿದ್ದೇವೆ. ಫ್ಲೈಓವರ್ ಮೇಲೆ ನಿಂತು ನೋಡಿದರೆ ದೇಶ ಮುಂದಕ್ಕೆ ಹೋಗುತ್ತಿರುವಂತೆ ಕಾಣುತ್ತದೆ; ಅದರ ಕೆಳಗಡೆ ಇರುವ ಹಳ್ಳಿಗಳ ಹಳ್ಳಿತನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ದಿನೇ ದಿನೇ ಕೆಳಗೆ ನಿಧಾನವಾಗಿ ಮರೆತು ಹೋಗುತ್ತಿರುವ ಊರುಗಳ ಕಥೆ ಯಾರಿಗೂ ಕಾಣಿಸದೇ ಹೋಗುತ್ತಿದೆ.
ನದಿ ಹೊಳೆಗಳಿಗೆ ಸೇತುವೆಗಳೇ ಇಲ್ಲದ ಹಳ್ಳಿಗಳು ನಾಗರಿಕ ಜಗತ್ತಿನಿಂದ ಸಂಪೂರ್ಣವಾಗಿ ದೂರವಿದ್ದವು ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಮಣ್ಣಿನ ರಸ್ತೆ ಇತ್ತು. ಆ ರಸ್ತೆ ರೈತನ ಉತ್ಪನ್ನಗಳನ್ನು ಮಾರುಕಟ್ಟೆಯ ಕಡೆಗೆ ಕರೆದೊಯ್ಯುವಷ್ಟು ಸಾಮರ್ಥ್ಯ ಹೊಂದಿತ್ತು. ಹಳ್ಳಿಯೊಳಗಿನ ಬದುಕನ್ನು ಒಂದೇ ದಾರಿಯಲ್ಲಿ ಕಟ್ಟಿಹಾಕುವ ಕೆಲಸ ಅದೇ ಮಣ್ಣು ರಸ್ತೆ ಮಾಡುತ್ತಿತ್ತು. ಮನುಷ್ಯನ ನಡಿಗೆಯ ವೇಗದಲ್ಲಿ ಸಾಗುವ ರಸ್ತೆ ಅದು. ಅಲ್ಲಿ ಬಿಸಿಲ ಬೇಗೆಯೂ ಇತ್ತು, ಮಳೆಯೂ ಇತ್ತು, ಆದರೆ ರಸ್ತೆ ಗ್ರಾಮದ ಬದುಕಿಗೆ ವಿರುದ್ಧವಾಗಿರಲಿಲ್ಲ.
ಇವತ್ತು ಹಳ್ಳಿಗಳ ಮಧ್ಯೆ ಬರುವ ರಾಷ್ಟ್ರೀಯ ಹೆದ್ದಾರಿಗಳ ಸ್ವಭಾವ ಬೇರೆ. ಅವು ಸಂಪರ್ಕ ಕಲ್ಪಿಸುವುದಕ್ಕಿಂತ ಹೆಚ್ಚು ವಿಭಜನೆ ಮಾಡುತ್ತವೆ. ಒಂದು ಕಡೆ ರೈತನ ಹೊಲ-ಗದ್ದೆ-ತೋಟ, ಇನ್ನೊಂದು ಕಡೆ ಅವನ ಮನೆ. ಮಧ್ಯೆ ಅಗಲವಾದ ರಸ್ತೆ. ರೈತ ತನ್ನ ಹೊಲಕ್ಕೆ ಹೋಗುವುದಕ್ಕೂ ಈಗ ದಾರಿ ಕೇಳಿಕೊಳ್ಳಬೇಕಾದ ಸ್ಥಿತಿ. ರಸ್ತೆ ಹಳ್ಳಿಗೆ ಬಂದಿಲ್ಲ, ಹಳ್ಳಿಯನ್ನೇ ಕತ್ತರಿಸಿಕೊಂಡು ಹೋಗಿದೆ ಎನ್ನಿಸುವುದು ಅಲ್ಲಿ ಬದುಕುತ್ತಿರುವವರಿಗೆ ಮಾತ್ರ ಗೊತ್ತು.
ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನ ನಡಿಗೆಯ ವೇಗವನ್ನು ಮೀರಿಸುವ ಹೆದ್ದಾರಿಗಳನ್ನು ನಿರ್ಮಿಸುವಾಗ, ಆ ನೆಲದ ಮೂಲ ಸಂಸ್ಕೃತಿ, ಅದರ ನೆನಪುಗಳು, ಅದರ ಬದುಕಿನ ಸಹಜ ಲಯಕ್ಕೆ ಏನಾಗುತ್ತದೆ ಎಂಬ ಪ್ರಶ್ನೆ ನಮಗೆ ತೊಂದರೆ ಕೊಡದೇ ಹೋಗುವುದು ಆತಂಕದ ಸಂಗತಿ. ವೇಗವೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿ ನಾವು ಬದುಕಿನ ಅರ್ಥವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಒಮ್ಮೆ ನಿಲ್ಲಿಸಿ ಯೋಚಿಸಬೇಕಾಗಿದೆ.
ರಸ್ತೆ ಅಗಲ ಮಾಡುವ ಸಂದರ್ಭದಲ್ಲಿ ನೂರಾರು ವರ್ಷಗಳ ಹಿಂದೆ ಎರಡೂ ಬದಿಗಳಲ್ಲಿ ನೆಟ್ಟ ಆಲ, ಅರಳಿ, ಮಾವು, ತೇಗ ಮುಂತಾದ ಮರಗಳನ್ನು ಉರುಳಿಸುವುದಕ್ಕೂ, ಕನಿಷ್ಠ ಒಂದು ಬದಿಯ ಮರವನ್ನು ಉಳಿಸಿಕೊಂಡು ರಸ್ತೆ ವಿಸ್ತರಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನು ಅಳತೆಯ ಯಂತ್ರಗಳು ಹೇಳಲಾರವು. ಅದರಡಿಯಲ್ಲಿ ಬದುಕಿರುವವರು ಮಾತ್ರ ಅರ್ಥಮಾಡಿಕೊಳ್ಳಬಲ್ಲರು.
ಆ ಮರಗಳು ಕೇವಲ ನೆರಳು ಕೊಡುವ ವಸ್ತುಗಳಲ್ಲ. ಅವು ವಾತಾವರಣವನ್ನು ಶುದ್ಧಗೊಳಿಸುವ ಜೀವಂತ ವ್ಯವಸ್ಥೆ. ಸಾವಿರಾರು ಪಕ್ಷಿ-ಪ್ರಾಣಿಗಳಿಗೆ ಆಹಾರ ನೀಡಿದ ಮೂಲ. ಅದಕ್ಕಿಂತ ಮುಖ್ಯವಾಗಿ, ಅವು ಮನುಷ್ಯನ ನೆನಪಿನ ತಾಣಗಳು. ನಮ್ಮ ಹಿರಿಯರು ಆ ಮರಗಳ ಅಡಿಯಲ್ಲಿ ನಡೆದು ಹೋಗುವಾಗ ಪಿಸುಮಾತಿನಲ್ಲಿ ಹೇಳಿದ ಕಥೆಗಳು, ಅದೇ ನೆರಳಲ್ಲಿ ಮಲಗಿ ಕಂಡ ಕನಸುಗಳು, ಗಂಟು ಬಿಚ್ಚಿ ತಿಂಡಿ ತಿಂದ ಕ್ಷಣಗಳು ಎಲ್ಲವೂ ಅವುಗಳ ಭಾಗವೇ.
ಯಕ್ಷಗಾನದ, ರಂಗಭೂಮಿಯ ಪೆಟ್ಟಿಗೆಗಳು ಅಲ್ಲಿ ಇಳಿದಿವೆ. ಊರ ಮದುಮಗ-ಮದುಮಗಳ ದಿಬ್ಬಣ ಬಿಸಿಲಿನ ಬೇಗೆ ತಡೆಯಲಾರದೆ ಅದೇ ಮರದ ಅಡಿಯಲ್ಲಿ ತಂಗಿವೆ. ಅರವಟ್ಟಿಗೆಯ ನೀರು ಕುಡಿದು, ಬಿದ್ದ ಮಾವನ್ನು ಒರಸಿ ತಿಂದ ಎಷ್ಟೋ ಮಂದಿ ಬದುಕಿನ ಸಣ್ಣ ಸಣ್ಣ ಸಂತೋಷಗಳನ್ನು ಅಲ್ಲಿ ಕಂಡಿದ್ದಾರೆ. ಆ ಮರಗಳು ರಸ್ತೆಗಿಂತ ದೊಡ್ಡ ಸಾಮಾಜಿಕ ಸ್ಥಳಗಳು. ಇವತ್ತು ರಸ್ತೆ ಇದೆ. ಅಗಲವೂ ಇದೆ. ವೇಗವೂ ಇದೆ. ಆದರೆ ಆ ಮರಗಳ ಜಾಗದಲ್ಲಿ ಮೌನ ಮಾತ್ರ ಉಳಿದಿದೆ.
ರಸ್ತೆ ಗಮ್ಯವಲ್ಲ, ರಸ್ತೆ ಒಂದು ಸಾಧನ ಮಾತ್ರ. ಆ ಸಾಧನವೇ ಗಮ್ಯವಾಗಿ ಬಿಟ್ಟರೆ ಅಭಿವೃದ್ಧಿ ಎಂಬ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಳ್ಳಿಗಳನ್ನು ಜೋಡಿಸುವ ರಸ್ತೆ ನಮಗೆ ಬೇಕು. ಆದರೆ ಬದುಕು, ನೆನಪು, ಸಂಸ್ಕೃತಿಯನ್ನು ಕತ್ತರಿಸುವ ಹೆದ್ದಾರಿ ಬೇಡ.