×
Ad

ವಿರಾಮ ಕಳೆದುಕೊಂಡ ಮನುಷ್ಯ ಮತ್ತು ಮನಸ್ಸು!

Update: 2025-12-28 10:20 IST

ಕಥೆ ಹುಟ್ಟಬೇಕಾದ ಜಾಗದಲ್ಲಿ ವೌನ ಕೂತಿದೆ. ಭೂತದ ಮನೆಯಲ್ಲೂ ಈಗ ಯಂತ್ರದ ಹಾವಳಿ. ಪೂಜೆ ನಡೆಯುತ್ತಿರುತ್ತದೆ, ಆದರೆ ಕಣ್ಣು ಪರದೆಯಲ್ಲಿ. ಗಂಟೆಯ ಸದ್ದು ಇದೆ, ಆದರೆ ಮಾತಿನ ಸದ್ದು ಇಲ್ಲ. ಪೂಜೆಯ ನಂತರ ಊಟದ ಸಾಲಿನಲ್ಲಿ ಕೂತವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ; ಅನ್ನಕ್ಕೆ ಕೈ ಇಡುವುದಷ್ಟೇ. ರುಚಿ, ಸ್ವಾದ, ಸವಿ ಬೇಕಾಗಿಲ್ಲ. ಅದರ ಅನುಭವ ಆಗದಷ್ಟೂ ಅಲ್ಲೂ ಎಲ್ಲರ ಕೈಯಲ್ಲೂ ಒಂದೊಂದು ಯಂತ್ರ!. ಈಗ ಊರೊಳಗಡೆಯೂ ಕಲಾತ್ಮಕತೆಯನ್ನು ಕಳೆದುಕೊಂಡು ಅದು ಕೇವಲ ಸುದ್ದಿಯಾಗಿ ವೇಗವಾಗಿ ಓಡುತ್ತದೆ.

ನಮ್ಮ ಬದುಕಿನ ದುಡಿಮೆ ಎಂದಿಗೂ ನಿರಂತರ ಹರಿವಲ್ಲ. ಮನುಷ್ಯನ ಶ್ರಮಕ್ಕೆ ಮಧ್ಯೆ ಮಧ್ಯೆ ಚಿಕ್ಕ ನಿಲುಗಡೆಗಳು ಬೇಕು. ಹೊಲ ಉಳುವಾಗ, ಬತ್ತ ಕುಟ್ಟುವಾಗ, ಮಡಿಕೆ ಮಾಡುವಾಗ, ರಾಗಿ ಬೀಸುವಾಗ, ಯಕ್ಷಗಾನ ಕುಣಿಯುವಾಗ, ಬೆಟ್ಟ ಏರುವಾಗ, ಕಣಿವೆ ಇಳಿಯುವಾಗ, ಹಾಡುವಾಗ, ಓಡುವಾಗ, ಓದುವಾಗ, ನೋಡುವಾಗ ಎಲ್ಲೆಲ್ಲೂ ಆ ಚಿಕ್ಕ ವಿರಾಮಗಳು ಸಹಜವಾಗಿ ಹುಟ್ಟುತ್ತವೆ. ಹೊಲಗದ್ದೆ, ತೋಟ, ಶಾಲೆ, ಮನೆ, ಕಾರ್ಖಾನೆ, ಮೈದಾನ, ಕಾಡು, ಲ್ಯಾಬ್, ಬಯಲು, ರಂಗಸ್ಥಳ, ಚೌಕಿ ಎಲ್ಲ ಕಡೆ ದುಡಿಯುವ ಮನುಷ್ಯ ಒಂದು ಕ್ಷಣ ನಿಂತು ನಿಟ್ಟುಸಿರು ಬಿಡುತ್ತಾನೆ. ಮೈಕೈ ಚೆಲ್ಲುತ್ತಾನೆ. ತಾಂಬೂಲ ಮೆಲ್ಲುತ್ತಾನೆ. ನೀರು ಕುಡಿಯುತ್ತಾನೆ. ಬೀಡಿ ಸೇದುತ್ತಾನೆ.

ಯಂತ್ರವಲ್ಲದ ಮನುಷ್ಯನಿಗೆ ಬಿಡುವಿಲ್ಲದೆ ದುಡಿಯುವುದು ಅಸಹಜ. ಆ ಚಿಕ್ಕ ವಿರಾಮಗಳು ದುಡಿಮೆಯ ವಿರೋಧಿಗಳಲ್ಲ; ಅವೇ ದುಡಿಮೆಯನ್ನು ಮುಂದಕ್ಕೆ ಒಯ್ಯುವ ಚೇತೊಹಾರಿ ಬಿಡುವುಗಳು. ಆ ಕ್ಷಣಗಳಲ್ಲಿ ನಾವು ಯಂತ್ರಗಳಾಗಿರಲಿಲ್ಲ. ಪಕ್ಕದಲ್ಲಿರುವ ಮತ್ತೊಬ್ಬನ ಜೊತೆ ನಗುತ್ತಾ, ಸುಖದುಃಖ ಹಂಚಿಕೊಳ್ಳುತ್ತಾ ಮನುಷ್ಯರಾಗುತ್ತಿದ್ದೆವು.

ರಾವಣ, ಕೌರವನ ವೇಷ ಹಾಕಿಕೊಂಡು ರಂಗಸ್ಥಳವನ್ನೇ ಪುಡಿಗಟ್ಟಿದ ಕಲಾವಿದರು, ಚೌಕಿಯೊಳಗಡೆ ಬೀಡಿ ಸೇದುತ್ತಾ ಸೀತೆ, ದ್ರೌಪದಿಯ ಜೊತೆ ಹರಟೆ ಹೊಡೆಯುತ್ತಿದ್ದ ದೃಶ್ಯಗಳನ್ನು ನಾನು ಕಂಡಿದ್ದೇನೆ. ಕುಬೇರನ ವೇಷದಲ್ಲೇ ತಾಂಬೂಲ ಮೆಲ್ಲುತ್ತಾ ನಿಜ ಬದುಕಿನ ಸಾಲ, ಸಂಕಟಗಳ ಬಗ್ಗೆ ಮಾತಾಡುತ್ತಿದ್ದ ನಾಟಕ ಕಲಾವಿದನನ್ನೂ ನೋಡಿದ್ದೇನೆ. ಉಳುಮೆಯ ಹೊತ್ತು ಎತ್ತುಗಳನ್ನು ಗದ್ದೆಯಲ್ಲೇ ನಿಲ್ಲಿಸಿ, ಕಟ್ಟಪುಣಿಗೆ ಏರಿ, ನನ್ನ ಅಪ್ಪಯ್ಯ ಪಕ್ಕದ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಇಬ್ರಾಹೀಂ ಬ್ಯಾರಿಯವರ ಜೊತೆ ಒಂದೈದು ನಿಮಿಷ ತಮಾಷೆ ಮಾತನಾಡಿ ಮತ್ತೆ ಗದ್ದೆಗೆ ಇಳಿಯುತ್ತಿದ್ದ ಕ್ಷಣಗಳು ಇನ್ನೂ ನೆನಪಿನಲ್ಲಿವೆ.

ಒಂದು ಕ್ಲಾಸ್ ಮುಗಿಸಿ ಇನ್ನೊಂದು ಕ್ಲಾಸ್ ಶುರುವಾಗುವ ನಡುವಿನ ಚಿಕ್ಕ ಬಿಡುವಿನಲ್ಲಿ, ಸಹೋದ್ಯೋಗಿಗಳ ಜೊತೆ ಹರಟೆ ಹೊಡೆಯುತ್ತಿದ್ದ ದಿನಗಳಿವೆ. ಶಸ್ತ್ರಚಿಕಿತ್ಸೆ ಮುಗಿಸಿ ಬಂದ ವೈದ್ಯರು, ಇನ್ನೊಂದು ಆಪರೇಷನ್ ಮುಂಚೆ, ಮಗಳ ಮದುವೆಯ ತಯಾರಿಯ ಬಗ್ಗೆ ಸಹ ವೈದ್ಯರ ಜೊತೆ ಮಾತನಾಡುತ್ತಿದ್ದ ಕ್ಷಣಗಳೂ ಇದ್ದವು. ಆ ಮಾತುಗಳಾವುದೂ ನಮ್ಮ ನಮ್ಮ ಮುಂದಿನ ಕೆಲಸವನ್ನು ತಡೆಯಲಿಲ್ಲ; ಬದಲಾಗಿ ಕೆಲಸಕ್ಕೆ ಮನಸ್ಸನ್ನು ಸಿದ್ಧಗೊಳಿಸುತ್ತಿದ್ದವು.

ಬಸ್ಸಿನಲ್ಲಿ ಪ್ರಯಾಣಿಸುವಾಗ ಪಕ್ಕದ ಸೀಟಿನ ಅಪರಿಚಿತ ಹಿರಿಯನ ಜೊತೆ ಊರು, ಮಳೆ, ಬೆಳೆ, ಮಕ್ಕಳ ಭವಿಷ್ಯದ ಮಾತುಗಳು ಸಹಜವಾಗಿ ಹರಿಯುತ್ತಿದ್ದವು. ಎದುರಿನ ಸೀಟಿನ ಅಳುವ ಮಗುವನ್ನು ಮುದ್ದಾಡಿ ಸಮಾಧಾನಪಡಿಸುತ್ತಿದ್ದೆವು. ನಗುವ ಪುಟ್ಟನನ್ನು ಕ್ಷಣಕಾಲ ಎದೆಗೊತ್ತಿಕೊಂಡು ರಮಿಸುತ್ತಿದ್ದೆವು. ಆಚೆಯವರು ಓದುತ್ತಿದ್ದ ಪತ್ರಿಕೆಯ ಒಂದೆರಡು ಪುಟಗಳನ್ನು ಕಸಿದುಕೊಂಡು ಗಮನಿಸುತ್ತಿದ್ದೆವು. ಆ ಚಿಕ್ಕ ಚಿಕ್ಕ ಕ್ಷಣಗಳಲ್ಲೇ ಪ್ರಯಾಣದುದ್ದಕ್ಕೂ ಸಹವಾಸ ಬೆಳೆಯುತ್ತಿತ್ತು.

ಇವತ್ತು ಆ ವಿರಾಮಗಳು, ದುಡಿಮೆಯ ನಡು ಎಡೆಯ ಆರಾಮಗಳು ನಿಧಾನವಾಗಿ ಮಾಯವಾಗುತ್ತಿವೆ. ಶ್ರಮದ ಮಧ್ಯೆ ಸಿಗುವ ಆ ಪುಟ್ಟ ಬಿಡುವುಗಳನ್ನು ನಮ್ಮ ಅಂಗೈಯಲ್ಲಿರುವ ಯಂತ್ರ ಕಬಳಿಸಿದೆ. ಕಾಲೇಜು, ಸಭೆ, ಸೆಮಿನಾರ್, ಸತ್ಯನಾರಾಯಣ ಪೂಜೆ, ಮದುವೆ- ಮುಂಜಿ ಅದೆಲ್ಲ ಪಕ್ಕಕ್ಕಿರಲಿ, ಪುಟ್ಟ ಮನೆಯಲ್ಲಿ ಬದುಕುವ ಆರೇಳು ಮಂದಿ ನೆಟ್ಟಗೆ ಅಕ್ಕಪಕ್ಕ ಕೂತು ಸುಖ-ದುಃಖ ಮಾತನಾಡಿದ, ಒಟ್ಟಿಗೆ ಕೂತು ಊಟ ಮಾಡಿದ ಸಂದರ್ಭಗಳೆಷ್ಟು ಎಂಬುದನ್ನು ನೀವೇ ಲೆಕ್ಕಹಾಕಿ.

ಬೇರೆ ಊರು, ಸಮಾರಂಭ, ಮನೆಗಳೇ ಯಾಕೆ? ನೀವು ಬದುಕುವ ಮನೆ, ಪರಿಸರಗಳಲ್ಲಿ ಇಂಥ ಹರಟೆಗಳಿಗೆ ಎಷ್ಟು ಅವಕಾಶಗಳಿವೆ ಎಂದು ಯೋಚಿಸಿ. ಸಂಜೆ ಎಲ್ಲರೂ ಒಟ್ಟಿಗೆ ಕೂತು ಕೂಡೂಟ ಮಾಡುವಾಗ ಅಕ್ಕನ ಕಥೆ, ಅಪ್ಪನ ಕಥೆ, ತಂಗಿ ತನ್ನ ಶಾಲೆಯ ಕಥೆ, ಅಜ್ಜ ತನ್ನ ಬಾಲ್ಯದ ಕಥೆ ಹಂಚಿಕೊಂಡು ಬಟ್ಟಲ ಅನ್ನವನ್ನು ಸುಖಿಸಿದ ದಿನಗಳು ಈಗ ನಿಮ್ಮ ಮನೆಯಲ್ಲಿ ಇವೆಯೇ ಲೆಕ್ಕ ಹಾಕಿ.

ಮನೆ, ನಗರ ಬಿಡಿ, ಗದ್ದೆಯೋ, ಮನೆಯೋ, ತೋಟವೋ, ಗುಡ್ಡೆಯೋ ಒಂದು ವೇಳೆ ಅಲ್ಲೆಲ್ಲದುಡಿಯುತ್ತಿದ್ದರೂ ಕೆಲಸ ನಿಂತ ಕ್ಷಣಕ್ಕೆ ನಮ್ಮ ಕಣ್ಣು ಈಗ ಪಕ್ಕದ ಮನುಷ್ಯನ ಕಡೆ ಹೋಗುವುದಿಲ್ಲ; ಕೈ ಸ್ವಯಂಚಾಲಿತವಾಗಿ ಮೊಬೈಲ್ ಪರದೆಯ ಕಡೆ ಜಾರುತ್ತದೆ. ಪಕ್ಕದಲ್ಲೊಬ್ಬ ಇದ್ದಾನೆ, ಆದರೆ ಇಲ್ಲದಂತೆಯೇ. ಮನೆಯಲ್ಲೊಬ್ಬ ಇದ್ದಾನೆ, ಆದರೆ ಇಲ್ಲದಂತೆಯೇ. ಬದುಕಿನ ಪ್ರಯಾಣದುದ್ದದ ವೌನವನ್ನು ಈಗ ಯಂತ್ರ ಕಟ್ಟಿಕೊಂಡ ಯಾವ ಮನುಷ್ಯನು ತುಂಬು ಮಾತಿನಿಂದ ತುಂಬುವುದಿಲ್ಲ; ಬರೀ ಮೊಬೈಲ್- ಡಿಜಿಟಲ್ ಪರದೆಗಳೇ ತುಂಬುತ್ತದೆ.

ರಂಗಸ್ಥಳದಲ್ಲಿ ರಾವಣನಾಗಿ ಮೆರೆದವನು, ವೇಷ ಕಳಚಿ ಚೌಕಿಯಲ್ಲಿ ಕೂತ ಶ್ರೀರಾಮನ ಹೆಗಲಿಗೆ ಕೈ ಹಾಕಿ ತಾನು ರಂಗದಲ್ಲಿ ಆಡಿರುವ ಮಾತಿನ ಬಗ್ಗೆ ಚರ್ಚಿಸುವುದಿಲ್ಲ, ಅವನ ಆವೇಶ, ದರ್ಪ, ಯುದ್ಧದ ಕಣ್ಣೀರು ಇವೆಲ್ಲವೂ ಬರೀ ರಂಗಸ್ಥಳಕ್ಕೆ ಮಾತ್ರ ಸೀಮಿತ. ವೇಷ ಕಳಚಿದ ಕ್ಷಣ ಅವನ ಕಣ್ಣು ಮಾತ್ರ ಮೊಬೈಲ್ ಪರದೆ ಮೇಲೆ ಜೀವಂತ. ಪಕ್ಕದಲ್ಲೇ ಕೂತ ಮತ್ತೊಬ್ಬ ಕಲಾವಿದನ ಮುಖ ಅವನಿಗೆ ಕಾಣುವುದಿಲ್ಲ.

ಗದ್ದೆಯಲ್ಲಿ ಸುಗ್ಗಿ ಉಳುಮೆ ಮಾಡುತ್ತಿದ್ದ ರಾಮಣ್ಣ, ಎತ್ತುಗಳನ್ನು ನಿಲ್ಲಿಸಿ ಬದುವಿನ ಮೇಲೆ ಕೂತು ಮೊಬೈಲ್ ಉಜ್ಜುತ್ತಾನೆ. ಹಿಂದೆ ಇದೇ ಬದುವಿನಲ್ಲಿ ಕೂತು, ‘‘ಈ ಬಾರಿ ಮಳೆ ಸರಿಯಾಗಿದೆಯಾ?’’ ಎಂದು ಪಕ್ಕದ ಗದ್ದೆಯವರನ್ನು ಕೇಳುತ್ತಿದ್ದ. ಈಗ ಮಳೆಯ ಸುದ್ದಿಯೂ ಮೊಬೈಲ್ ಒಳಗೆ; ಮನುಷ್ಯ ಮಾತ್ರ ಹೊರಗಡೆ ಕೇವಲ ಒಂಟಿ.

ಒಂದು ಕ್ಲಾಸ್ ಮುಗಿಸಿ ಬಂದ ಕನ್ನಡದ ಮೇಷ್ಟ್ರು, ಇನ್ನೊಂದು ಕ್ಲಾಸ್‌ಗೆ ಹೋಗುವ ಮುಂಚಿನ ಚಿಕ್ಕ ಗ್ಯಾಪ್‌ನಲ್ಲಿ ಈಗ ಮೊಬೈಲ್ ನೋಡುತ್ತಿದ್ದಾರೆ. ಹಿಂದೆ ಇದೇ ಬಿಡುವಿನಲ್ಲಿ ಒಂದು ಸಾಲು ಕಾವ್ಯ, ಒಂದು ಸಾಲು ವಚನ, ಅಥವಾ ‘‘ಇವತ್ತು ಮಕ್ಕಳು ಚೆನ್ನಾಗಿ ಕೇಳಿದ್ರು’’ ಅನ್ನುವ ಹಗುರ ಮಾತು ಹರಿಯುತ್ತಿತ್ತು. ಈಗ ಆ ಮಾತುಗಳ ಜಾಗವನ್ನು ವೌನ ಆಕ್ರಮಿಸಿಕೊಂಡಿದೆ.

ಗದ್ದೆ, ಶಾಲೆ, ಕಾರ್ಖಾನೆ, ಮದುವೆ ಚಪ್ಪರ, ಬೊಜ್ಜದ ಮನೆ ಎಲ್ಲೆಲ್ಲೂ ಒಂದೇ ದೃಶ್ಯ. ಚಿಕ್ಕ ಬಿಡುವು ಸಿಕ್ಕರೂ ಸಾಕು; ಪಕ್ಕದಲ್ಲಿರುವ ಮನುಷ್ಯನ ಕಡೆ ಮುಖ ಮಾಡುವ ಬದಲು, ದೇಹಕ್ಕೆ ಅಂಟಿಕೊಂಡಿರುವ ಯಂತ್ರದೊಳಗೆ ತಲೆ ಹಾಕುತ್ತೇವೆ. ಅಲ್ಲಿ ಯಾರೋ ಇದ್ದಾರೆ, ಇಲ್ಲದವರೇ ಇದ್ದಾರೆ; ಆದರೆ ನಮ್ಮ ಪಕ್ಕದಲ್ಲಿರುವವರು ನಿಧಾನವಾಗಿ ಕಾಣೆಯಾಗುತ್ತಿದ್ದಾರೆ.

ಚಿಕ್ಕ ಬಿಡುವಿನಲ್ಲಿ ಮೊಬೈಲ್‌ನ್ನು ಜೇಬಿನಲ್ಲಿ ಇಟ್ಟು, ಪಕ್ಕದಲ್ಲಿರುವವನ ಮುಖ ನೋಡಿದರೆ ಸಾಕು, ಕೇವಲ ಒಂದು ಮಾತು, ಒಂದು ನಗು, ಒಂದು ಹರಟೆ ಮನುಷ್ಯ ಮತ್ತೆ ಮನುಷ್ಯನಾಗಲು ಅಷ್ಟೇ ಸಾಕು. ಗ್ರಾಮಗಳ ಆತ್ಮ ದೊಡ್ಡ ದೊಡ್ಡ ಘೋಷಣೆಯಲ್ಲಿ ಉಳಿಯುವುದಿಲ್ಲ. ಅದು ಚಿಕ್ಕ ಮಾತಿನಲ್ಲಿ, ಚಿಕ್ಕ ನಗುವಿನಲ್ಲಿ, ಚಿಕ್ಕ ವಿರಾಮದಲ್ಲಿ ಉಳಿಯುತ್ತದೆ. ಅದನ್ನು ನಾವು ಕಳೆದುಕೊಳ್ಳಬಾರದು.

ನಗರಗಳನ್ನು ಬಿಡಿ, ಹಳ್ಳಿಗಳ ಕಥೆ ಕೇಳಿ ಎಂದು ಹೇಳಿದರೆ ಅದು ಹಳೆಯ ಕಾಲದ ನಾಸ್ತಾಲ್ಜಿಯಾ ಅಲ್ಲ. ಅದು ಮನುಷ್ಯ ಬದುಕಿನ ಮೂಲವನ್ನು ನೆನಪಿಸುವ ಮಾತು. ಒಂದು ಕಾಲದಲ್ಲಿ ಕಥೆಗಳು ಪುಸ್ತಕಗಳಲ್ಲಿ ಹುಟ್ಟುತ್ತಿರಲಿಲ್ಲ. ಅವು ಹುಟ್ಟಿದ್ದು ಅರಳಿ ಕಟ್ಟೆಯ ಕೆಳಗೆ, ಗ್ರಾಮಚಾವಡಿಯಲ್ಲಿ, ಅಜ್ಜನ ಜಗಲಿಯಲ್ಲಿ, ಗದ್ದೆಯ ಬದುವಿನಲ್ಲಿ. ಹಾಗಂತ ಅಲ್ಲಿಯಾರೂ ‘ಕಥೆ ಹೇಳೋಣ’ ಅಂತ ಕುಳಿತುಕೊಳ್ಳುತ್ತಿರಲಿಲ್ಲ. ಮಾತು ಮಾತಾಗಿ, ಘಟನೆ ಘಟನೆಗೆ ಜೋಡಿಸಿ, ಕಥೆಗಳು ತಾನಾಗಿಯೇ ಹುಟ್ಟುತ್ತಿದ್ದವು.

ಅರಳಿ ಕಟ್ಟೆ ಎಂದರೆ ಕೇವಲ ಮರದ ನೆರಳಲ್ಲ. ಅದು ಊರಿನ ನೆನಪಿನ ಸಂಗ್ರಹಾಲಯ. ಯಾರು ಯಾರಿಗೆ ಏನು ಹೇಳಿದರು, ಯಾರು ಯಾರ ಜೊತೆ ಮಾತಾಡುವುದಿಲ್ಲ, ಯಾರು ಯಾರ ಜೊತೆ ಓಡಿ ಹೋದಳು, ಯಾವ ಮಳೆಯ ವರ್ಷ ಯಾವ ಬೆಳೆ ಚೆನ್ನಾಗಿತ್ತು ಎಲ್ಲವೂ ಅಲ್ಲಿ ಜಮೆಯಾಗುತ್ತಿತ್ತು. ಗ್ರಾಮಚಾವಡಿ ಎಂದರೆ ಸಭಾಭವನ ಅಲ್ಲ; ಅದು ಊರಿನ ಹೃದಯ. ಅಲ್ಲಿ ಕೂತವರು ಸುದ್ದಿಯನ್ನು ಮಾತ್ರ ಹಂಚಿಕೊಳ್ಳುತ್ತಿರಲಿಲ್ಲ, ಸುದ್ದಿಗೆ ಅರ್ಥ ಕೊಟ್ಟವರು. ಅಜ್ಜನ ಜಗಲಿ ಎಂದರೆ ಮನೆ ಮುಂದಿನ ಆಸನ ಮಾತ್ರವಲ್ಲ; ಅದು ತಲೆಮಾರಿನಿಂದ ತಲೆಮಾರಿಗೆ ಹರಿದ ಕಥೆಗಳ ವೇದಿಕೆ. ಗದ್ದೆಯ ಬದುವಿನಲ್ಲಿ ಕೂತಾಗ ಕಥೆಗಳು ಇನ್ನಷ್ಟು ಜೀವಂತವಾಗುತ್ತಿತ್ತು. ಉಳುಮೆಯ ನಡುವೆ ನಿಂತು, ಎತ್ತುಗಳಿಗೆ ಉಸಿರೊದಗಿಸುತ್ತಾ, ಪಕ್ಕದ ಗದ್ದೆಯವರ ಜೊತೆ ಎರಡು ಮಾತು ಆಡಿದರೆ ಸಾಕು ಅಲ್ಲಿಂದಲೇ ಕಥೆ ಶುರು. ಯಾರೋ ಹೇಳಿದ ಒಂದು ಸಾಲು, ಇನ್ನೊಬ್ಬನ ನೆನಪಿನ ಒಂದು ತುಣುಕು, ಮೂರನೆಯವನ ಅನುಭವದ ಒಂದು ನೆನಪು ಹೀಗೆ ಕಥೆಗೆ ರೆಕ್ಕೆಪುಕ್ಕ ಸೇರುತ್ತಿತ್ತು. ನಾಟಿ ಮನುಷ್ಯರು ಆ ಕಥೆಗಳನ್ನು ಹೊತ್ತುಕೊಂಡು ಊರಿನಿಂದ ಊರಿಗೆ ಸಾಗುತ್ತಿದ್ದರು. ಕಥೆಗಳು ಅಲ್ಲೇ ಹುಟ್ಟಿ ಅಲ್ಲೇ ಬೆಳೆದು, ಅಲ್ಲೇ ರೂಪಾಂತರಗೊಳ್ಳುತ್ತಿದ್ದವು.

ಆ ಕಥೆಗಳು ಸಂಬಂಧಗಳನ್ನು ಕಟ್ಟುತ್ತಿದ್ದವು. ಭೂತದ ಮನೆ, ಸತ್ಯನಾರಾಯಣ ಪೂಜೆ ಇವು ಧಾರ್ಮಿಕ ಸ್ಥಳಗಳಷ್ಟೇ ಅಲ್ಲ; ಸಂಬಂಧಗಳ ನವೀಕರಣ ಕೇಂದ್ರಗಳು. ವರ್ಷಕ್ಕೊಮ್ಮೆ ಅಲ್ಲಿ ಸೇರಿದರೆ ಸಾಕು, ಹಳೆಯ ಮನಸ್ತಾಪಗಳಿಗೆ ಮಣ್ಣು ಬೀಳುತ್ತಿತ್ತು. ಕೂಡು ಸಂಬಂಧಗಳು ಮತ್ತೆ ಗಟ್ಟಿಯಾಗುತ್ತಿದ್ದವು. ಯಾರ ಜೊತೆ ಮಾತಾಡಬೇಕು, ಯಾರನ್ನು ತಪ್ಪಿಸಿಕೊಳ್ಳಬೇಕು ಅನ್ನೋದನ್ನೂ ಅಲ್ಲೇ ಮೃದುವಾಗಿ ಸರಿಪಡಿಸಿಕೊಳ್ಳುತ್ತಿದ್ದರು.

ಈಗ ಕಾಲ ಬದಲಾಗಿದೆ. ಕಥೆ ಹುಟ್ಟುವ ಗ್ರಾಮ ಲೋಕವೂ ಯಂತ್ರದ ದಾಳಿಗೆ ಒಳಗಾಗಿದೆ. ಅರಳಿ ಕಟ್ಟೆ ಇನ್ನೂ ನಿಂತಿದೆ, ಆದರೆ ಅದರ ಕೆಳಗೆ ಕೂತವರು ಕಡಿಮೆ. ಗ್ರಾಮಚಾವಡಿ ಇದೆ, ಆದರೆ ಮಾತಿಲ್ಲ. ಜಗಲಿ ಇದೆ, ಆದರೆ ಅಲ್ಲಿ ಕೂತು ಕಥೆ ಕೇಳುವ ಕಿವಿಗಳು ಇಲ್ಲ. ಗದ್ದೆಯ ಬದು ಅಗಲಗೊಂಡು ಡಾಂಬರು ರಸ್ತೆಯಾಗಿದೆ. ಅಲ್ಲಿ ಕೂತು ಮಾತಾಡುವ ಮನಸ್ಸು ಮಾಯವಾಗಿದೆ.

ಕಥೆ ಹುಟ್ಟಬೇಕಾದ ಜಾಗದಲ್ಲಿ ವೌನ ಕೂತಿದೆ. ಭೂತದ ಮನೆಯಲ್ಲೂ ಈಗ ಯಂತ್ರದ ಹಾವಳಿ. ಪೂಜೆ ನಡೆಯುತ್ತಿರುತ್ತದೆ, ಆದರೆ ಕಣ್ಣು ಪರದೆಯಲ್ಲಿ. ಗಂಟೆಯ ಸದ್ದು ಇದೆ, ಆದರೆ ಮಾತಿನ ಸದ್ದು ಇಲ್ಲ. ಪೂಜೆಯ ನಂತರ ಊಟದ ಸಾಲಿನಲ್ಲಿ ಕೂತವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ; ಅನ್ನಕ್ಕೆ ಕೈ ಇಡುವುದಷ್ಟೇ. ರುಚಿ, ಸ್ವಾದ, ಸವಿ ಬೇಕಾಗಿಲ್ಲ. ಅದರ ಅನುಭವ ಆಗದಷ್ಟೂ ಅಲ್ಲೂ ಎಲ್ಲರ ಕೈಯಲ್ಲೂ ಒಂದೊಂದು ಯಂತ್ರ!. ಈಗ ಊರೊಳಗಡೆಯೂ ಕಲಾತ್ಮಕತೆಯನ್ನು ಕಳೆದುಕೊಂಡು ಅದು ಕೇವಲ ಸುದ್ದಿಯಾಗಿ ವೇಗವಾಗಿ ಓಡುತ್ತದೆ.

ಯಾವತ್ತೂ ಸುದ್ದಿ ಕ್ಷಣಿಕ; ಕಥೆ ಕಾಲಾತೀತ. ಸುದ್ದಿ ತಿಳಿಸುತ್ತದೆ; ಕಥೆ ಜೋಡಿಸುತ್ತದೆ. ಗ್ರಾಮಗಳು ಇವತ್ತು ಕಥೆ ಕಳೆದುಕೊಂಡಂತಿವೆ. ಆದರೆ ಕಥೆ ಹೇಳುವ ಮನುಷ್ಯ ಇನ್ನೂ ಇದ್ದಾನೆ. ಅವನು ಯಂತ್ರವನ್ನು ಜೇಬಿನಲ್ಲಿ ಇಟ್ಟು, ಪಕ್ಕದಲ್ಲಿರುವವನ ಕಡೆ ಮುಖ ಮಾಡಿದರೆ ಸಾಕು. ಒಂದು ಮಾತು ಶುರುವಾದರೆ, ಕಥೆ ಮತ್ತೆ ಉಸಿರಾಡುತ್ತದೆ. ಅರಳಿ ಕಟ್ಟೆಗೆ ಮತ್ತೆ ಧ್ವನಿ ಬರುತ್ತದೆ. ಜಗಲಿಗೆ ಮತ್ತೆ ನೆನಪು ಮರಳುತ್ತದೆ.

ಕಥೆಗಳು ಇಲ್ಲದ ಊರು ಉಳಿಯಬಹುದು, ಆದರೆ ಬದುಕುವುದಿಲ್ಲ. ಕಥೆಗಳು ಉಳಿದ ಊರು ಯಾವತ್ತೂ ತನ್ನ ಆತ್ಮವನ್ನು ಉಳಿಸಿಕೊಂಡೇ ಇರುತ್ತದೆ. ಮಾತುಕತೆ ಎಂಬುದು ಇಬ್ಬರು ವ್ಯಕ್ತಿಗಳ ಸಮ್ಮುಖದಲ್ಲೇ ಪದರ ಪದರವಾಗಿ ರೂಪುಗೊಳ್ಳುವ, ಅಲ್ಲೇ ಹುಟ್ಟಿ ಆಕಾರ ಪಡೆಯುವ ಒಂದು ಮನೋಕ್ರಿಯೆ.ಇಲ್ಲಿ ಪ್ರಶ್ನೆ, ತರ್ಕ, ಸಂವಾದ, ಸರಿ-ತಪ್ಪು, ಸ್ವೀಕಾರ, ನಿರ್ಧಾರ, ಪ್ರೀತಿ, ಆಕ್ಷೇಪ ಎಲ್ಲವೂ ಇರುತ್ತದೆ. ಈ ಕಾರಣಕ್ಕಾಗಿಯೇ ಮನುಷ್ಯನ ಮಾತುಕತೆಯ ಲೋಕಶಾಲೆ ಕೂಡ ಕಲಿಕೆಯ ಒಂದು ಸುಸಂಸ್ಕೃತ ನೆಲೆಯೇ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News