×
Ad

61ನೇ ಜನ್ಮದಿನ ಆಚರಿಸಿದ ಸೆಂಚುರಿ ಸ್ಟಾರ್ ಬಳಿ 12 ಸಿನಿಮಾಗಳು

Update: 2023-07-14 22:12 IST

ಶಿವಣ್ಣ. 

- ಆರ್. ಜೀವಿ

ಶಿವಣ್ಣನಿಗೆ ಶಿವಣ್ಣ ಮಾತ್ರ ಸಾಟಿ. ಹ್ಯಾಟ್ರಿಕ್ ಹೀರೊ, ಕನ್ನಡಿಗರ ಕಣ್ಮಣಿ, ಅದ್ಭುತ ನಟ ಡಾ. ಶಿವರಾಜ್ ಕುಮಾರ್ ಅವರಿಗೆ ನಿನ್ನೆ ಜುಲೈ 12 ಕ್ಕೆ ತಮ್ಮ 61ನೇ ಜನ್ಮದಿನ. 61 ವರ್ಷವಾದರೂ 41 ರ ಯುವಕನಂತೆ ಫಿಟ್ ಅಂಡ್ ಫೈನ್ ಆಗಿರುವ ಶಿವಣ್ಣ ಬಳಿ ಈಗಿರುವ ಚಿತ್ರಗಳ ಸಂಖ್ಯೆ ಎಷ್ಟು ಗೊತ್ತಾ ?

‘ಆನಂದ್‌’ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟು 37 ವರ್ಷಗಳ ಬೆಳ್ಳಿ ತೆರೆಯ ಪಯಣದಲ್ಲಿ ಹ್ಯಾಟ್ರಿಕ್‌ ಹೀರೋದಿಂದ ಸೆಂಚುರಿ ಸ್ಟಾರ್‌ ಆದ ಶಿವಣ್ಣ ಬಳಿ ಈಗ ಒಂದೆರಡಲ್ಲ ಒಟ್ಟು 12 ಸಿನಿಮಾಗಳಿವೆ. ಅದೇ ಶಿವರಾಜ್ ಕುಮಾರ್ ಸ್ಪೆಷಾಲಿಟಿ. ಅವರ ಬೇಡಿಕೆ ಎಂದಿಗೂ ಕಡಿಮೆಯಾಗೋದೇ ಇಲ್ಲ. ಅವರೆಂದೂ ಸುಸ್ತಾಗೋದೂ ಇಲ್ಲ.

ಈಗ ತಮ್ಮ 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿರುವ ಅವರು ತಮ್ಮ 61ನೇ ಜನ್ಮದಿನವನ್ನು ಮೂರು ವರ್ಷಗಳ ಬಳಿಕ ಅಭಿಮಾನಿಗಳ ಸಮ್ಮುಖದಲ್ಲೇ ಆಚರಿಸಿಕೊಂಡರು. ಡಾ.ರಾಜ್‌ಕುಮಾರ್‌ ದಂಪತಿ ಸಮಾಧಿಗೆ ಪೂಜೆ ಸಲ್ಲಿಸಿ, ‘ಘೋಸ್ಟ್‌’ ಸಿನಿಮಾದ ‘ಬಿಗ್‌ ಡ್ಯಾಡಿ’ ಟೀಸರ್‌ ಅನಾವರಣ ಮಾಡಿದ ಶಿವರಾಜ್‌ಕುಮಾರ್‌, ಇನ್ನೂ ಹತ್ತು ವರ್ಷ ಸಾಲು ಸಾಲು ಸಿನಿಮಾ ಮಾಡುವ ತಮ್ಮ ಕನಸು ಬಿಚ್ಚಿಟ್ಟರು. ಇನ್ನಷ್ಟು ಹೊಸ ಹೊಸ ಚಿತ್ರಗಳನ್ನು ಮಾಡುವ ಅವರೊಳಗಿನ ಪುಟಿಯುವ ಉತ್ಸಾಹ ನೋಡಿದವರಿಗೆ ಅವರ ವಯಸ್ಸು ನೆನಪಿಗೇ ಬರೋದಿಲ್ಲ.

‘ಸದ್ಯಕ್ಕೆ 10–12 ಸಿನಿಮಾ ಕೈಯಲ್ಲಿದೆ. ಪ್ರಸ್ತುತ ‘ಘೋಸ್ಟ್‌’ ಡಬ್ಬಿಂಗ್‌ ಬಾಕಿ ಇದೆ. ಯೋಗರಾಜ್‌ ಭಟ್‌ ಅವರ ‘ಕರಟಕ ದಮನಕ’ ಚಿತ್ರೀಕರಣ ನಡೆಯುತ್ತಿದೆ. ಗೀತಾ ಪಿಕ್ಚರ್ಸ್‌ ಲಾಂಛನದಡಿ ನಿರ್ಮಾಣವಾಗುತ್ತಿರುವ ‘ಭೈರತಿ ರಣಗಲ್‌’, ಅರ್ಜುನ್‌ ಜನ್ಯ ನಿರ್ದೇಶನದ ‘45’ ಈ ವರ್ಷದ ಸರದಿಯಲ್ಲಿವೆ. ಮುಂದೆ ಯಾವ ಸಿನಿಮಾವನ್ನು ಕೈಗೆತ್ತಿಕೊಳ್ಳಬೇಕು ಎನ್ನುವುದು ಮುಂದಿನ ವರ್ಷ ನಿರ್ಧರಿಸಲಿದ್ದೇನೆ. ‘ಟಗರು–2’ ಬರುವ ಯೋಜನೆ ಮೊದಲೇ ಇತ್ತು. ಬಂದು ಮಾತುಕತೆ ನಡೆಸುತ್ತೇನೆ ಎಂದು ಸೂರಿ ಹೇಳಿದ್ದಾರೆ.

ಎರಡನೇ ಭಾಗವನ್ನು ಸೂರಿ ಅವರಿಂದಷ್ಟೇ ಮಾಡಲು ಸಾಧ್ಯ. 2023 ಒಂದು ರೀತಿಯಲ್ಲಿ ನನಗೆ ಹೊಸ ಅನುಭವಗಳನ್ನು ನೀಡಿದೆ. ನಮ್ಮ ಕುಟುಂಬದ ಭಾಗದಂತೆ ಇರುವ ರಜನಿಕಾಂತ್‌ ಅವರ ಜೊತೆ ‘ಜೈಲರ್‌’ ಸಿನಿಮಾದಲ್ಲಿ 10 ನಿಮಿಷಗಳ ಒಂದು ಕ್ಯಾಮಿಯೊ ಮಾಡಿದ್ದೇನೆ. ಇದು ನನ್ನ ಮೊದಲ ತಮಿಳು ಸಿನಿಮಾ. ಆಗಸ್ಟ್‌ 10ಕ್ಕೆ ಇದು ರಿಲೀಸ್‌ ಆಗಲಿದೆ. ಜೊತೆಯಲ್ಲಿ ಧನುಷ್‌ ಅವರ ಜೊತೆ ‘ಕ್ಯಾಪ್ಟನ್‌ ಮಿಲ್ಲರ್‌’ ನನ್ನ ಮತ್ತೊಂದು ತಮಿಳು ಸಿನಿಮಾ. ತಮಿಳು ಸಿನಿಮಾದಲ್ಲಿ ನಟಿಸಿರುವುದು ಈ ವರ್ಷದ ವಿಶೇಷ ಎನ್ನಬಹುದು’ ಎಂದು ಹೇಳಿದ್ದಾರೆ ಶಿವಣ್ಣ.

‘ಘೋಸ್ಟ್‌’ ವಿಭಿನ್ನವಾದ ಸಿನಿಮಾ. ಪಾಶ್ಚಿಮಾತ್ಯ ಶೈಲಿಯ ಈ ಸಿನಿಮಾದ ಚಿತ್ರಕಥೆಗೆ ಬಹಳ ವೇಗವಿದೆ. ಈ ವೇಗದ ಜೊತೆಯಲ್ಲಿ ಒಂದು ಸೈಕಾಲಾಜಿಕಲ್‌ ಥ್ರಿಲ್ಲರ್‌ ಇದಾಗಿದೆ. ‘ಘೋಸ್ಟ್‌’ ಸಂಪೂರ್ಣ ಶ್ರೀನಿ ವಿಷನ್‌. ಇದರ ಮೇಲೆ ನನಗೆ ನಂಬಿಕೆ ಇದೆ. ‘ಓಂ’ ಸತ್ಯನಿಗಿಂತಲೂ ಒಂದು ವಿಭಿನ್ನವಾದ ಪಾತ್ರವಿದು. ಇಲ್ಲಿಯೂ ‘ಬಿಗ್‌ ಡ್ಯಾಡಿ’ ಪಾತ್ರದ ಜೀವ ಸತ್ಯನಂತೆ ಇದೆ. ಟೀಸರ್‌ನಲ್ಲಿ ‘ಓಂ’ ಸ್ಟೈಲ್‌ ಶ್ರೀನಿಗೆ ಬೇಕಿದ್ದ ಕಾರಣ ಚಿತ್ರಿಸಿದ್ದೇವೆ. ಚಿತ್ರೀಕರಣ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ನನ್ನ ಪಾತ್ರದ ಡಬ್ಬಿಂಗ್‌ ಇನ್ನು ಆಗಬೇಕಷ್ಟೇ. ಈ ವರ್ಷದ ನನ್ನ ಮೊದಲ ಸಿನಿಮಾ ‘ಘೋಸ್ಟ್‌’ ಆಗಿರಲಿದೆ. ದಸರಾಗೆ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಭಾಗದಲ್ಲಿ ನಾಯಕಿ ಇಲ್ಲ. ‘ಘೋಸ್ಟ್‌’ ಸಿನಿಮಾದ ಎರಡನೇ ಭಾಗದಲ್ಲಿ ನಾಯಕಿ ಇರಬಹುದು. ಘೋಸ್ಟ್‌ ಎರಡನೇ ಭಾಗದ ನಿರ್ಮಾಣಕ್ಕೆ ಒಂದು ಒಳ್ಳೆಯ ಹಿಡಿತ ಸಿಕ್ಕಿದೆ’ ಎಂದಿದ್ದಾರೆ ಸೆಂಚುರಿ ಸ್ಟಾರ್‌.

ಸ್ಯಾಂಡಲ್‌ವುಡ್‌ನ ಬಹುತೇಕ ನಟರು ಎರಡು ಮೂರು ವರ್ಷಗಳಿಗೆ ಒಂದು ಸಿನಿಮಾ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಜ್‌ಕುಮಾರ್‌, ‘ನಟರ ಭಾವನೆಗಳಿಗೆ ಅಡ್ಡಿಪಡಿಸುವುದು ಸರಿಯಾಗುವುದಿಲ್ಲ. ನಾನು ಜೀವನವನ್ನು ಬಹಳ ಸರಳವಾಗಿ ತೆಗೆದುಕೊಂಡಿದ್ದೇನೆ. ಮುಂದೆ ಏನಾಗುತ್ತದೋ ತಿಳಿದಿಲ್ಲ. ಸಿನಿಮಾ ನಡೆಯುತ್ತಿರಬೇಕು. ನನಗೆ ದೇವರು ಶಕ್ತಿ ನೀಡಿದ್ದಾನೆ. ಒಳ್ಳೆಯ ನಿರ್ದೇಶಕರು ಸಿಗುತ್ತಿದ್ದಾರೆ’ ಎಂದರು.

‘ನಾನು ಜಾಗವನ್ನು ಇಷ್ಟಪಡುವವನೇ ಅಲ್ಲ, ಸಿನಿಮಾಗಳನ್ನು ಇಷ್ಟಪಡುವವನು. ಯಾವುದೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸಲು ನಾವಿದ್ದೇವೆ. ನಾನೊಬ್ಬ ಹಿರಿಯ ನಟನಾಗಿ ಅದರಲ್ಲಿ ಭಾಗಿಯಾಗುತ್ತೇನೆ. ಒಂದು ವಾರದೊಳಗೆ ಒಳ್ಳೆಯ ಪರಿಹಾರ ಸೂಚಿಸಲಿದ್ದೇವೆ’ ಎಂದು ಚಿತ್ರರಂಗದ ಸಮಸ್ಯೆ ಹಾಗು ಈಗ ಎದ್ದಿರುವ ವಿವಾದಗಳ ಕುರಿತು ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ ನೀಡಿದರು.

ಕನ್ನಡಿಗರ ಅಚ್ಚುಮೆಚ್ಚಿನ ಕಲಾವಿದ ಶಿವಣ್ಣ ಚಿರಯುವಕನಂತೆ ಇನ್ನಷ್ಟು, ಮಗದಷ್ಟು ಸಿನಿಮಾಗಳನ್ನು ಮಾಡುತ್ತಲೇ ಇರಲಿ. ಇನ್ನೂ ವಿಭಿನ್ನ, ವಿಶಿಷ್ಟ ಪಾತ್ರಗಳ ಮೂಲಕ ಕನ್ನಡಿಗರ ಮನ ತಣಿಸುತ್ತಲೇ ಇರಲಿ ಎಂಬುದು ನಮ್ಮೆಲ್ಲರ ಹಾರೈಕೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News