×
Ad

ಇನ್ನಿಲ್ಲದಂತೆ ಮುಗ್ಗರಿಸಿದ ತೇಜಸ್ ಚಿತ್ರ

Update: 2023-11-05 11:55 IST

Photo: bookmyshow.com

ಆ ಸಿನಿಮಾದಲ್ಲಿ ಏನಿರಲಿಲ್ಲ ?. ತೇಜಸ್ ಹೆಸರಿನ ದಿಟ್ಟ ಫೈಟರ್ ಪೈಲಟ್, ತೇಜಸ್ ಹೆಸರಿನ ಫೈಟರ್ ಜೆಟ್ ನಲ್ಲಿ, ತೇಜಸ್ ಹೆಸರಿನ ಮಿಷನ್ ಮೇಲೆ ಹೋಗ್ತಾಳೆ. ಈ ಹೊತ್ತಿನ ಬಲಪಂಥೀಯರ ಫೆವರಿಟ್ ಕಂಗನಾ ರಣಾವತ್ ಇಡೀ ಚಿತ್ರವನ್ನೇ ಆವರಿಸಿಕೊಂಡಿದ್ದರು.

ಆ ಸಿನಿಮಾದಲ್ಲಿ ರಾಷ್ಟ್ರೀಯತೆ ಇತ್ತು, ಜೊತೆಗೆ ರುಚಿಗೆ ಬೇಕಾದಷ್ಟು . ಅಲ್ಲಲ್ಲ. ರುಚಿಗೆ ಬೇಕಾದ್ದಕ್ಕಿಂತ ಜಾಸ್ತಿನೇ ಪಾಕಿಸ್ತಾನ ಇತ್ತು, ಭಯೋತ್ಪಾದನೆ ಇತ್ತು, ಮುಸ್ಲಿಂ ವಿಲನ್ ಗಳು ಇದ್ರು, ಅಯೋಧ್ಯೆ ಇತ್ತು, ರಾಮ ಮಂದಿರ ಇತ್ತು. ಅಯ್ಯೋ ಇಷ್ಟೆಲ್ಲಾ ಇತ್ತಾ... ಹೌದು ಇದೆಲ್ಲವೂ ಅದೊಂದೇ ಚಿತ್ರದಲ್ಲಿ ತುಂಬಿ ತುಳುಕುತ್ತಿತ್ತು.

ಸಿನಿಮಾ ಬಿಡುಗಡೆಗೆ ಬೇಕಾದ್ದಕ್ಕಿಂತ ಬಹಳ ಹೆಚ್ಚೇ ಪ್ರಚಾರ ಇತ್ತು. ಇಸ್ರೇಲ್ ರಾಯಭಾರ ಕಚೇರಿಗೇ ಹೋಗಿ ಸಿನಿಮಾ ಪ್ರಚಾರ ಮಾಡಿ ಬಂದಿದ್ರು ಕಂಗನಾ ರಣಾವತ್. ದಿಲ್ಲಿಯ ರಾಮಲೀಲಾ ಮೈದಾನಕ್ಕೆ ಹೋಗಿ ಬಾಣ ಬಿಟ್ಟಿದ್ರು ಕಂಗನಾ.

ಇನ್ನೇನು ಬೇಕು.. ಸಿನಿಮಾ ಸೂಪರ್ ಹಿಟ್ ಆಗೋಕೆ. ಕೋಟಿ ಕೋಟಿ ಬಾಚೋಕೆ. ಸಿನಿಮಾದಲ್ಲಿ ಸಿನಿಮಾ ಕೂಡ ಇರಬೇಕಿತ್ತು. ಒಂದು ಕತೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣ, ನಟನೆ, ವಿ ಎಫ್ ಎಕ್ಸ್ ಇದೆಲ್ಲವೂ ಸ್ವಲ್ಪವಾದರೂ ಇರ್ಬೇಕಲ್ವಾ ?.

ಅದೇ ಇರ್ಲಿಲ್ಲ ಕಂಗನಾ ರಣಾವತ್ ಹೊಸ ಚಿತ್ರದಲ್ಲಿ ಎನ್ನುತ್ತಿದ್ದಾರೆ ಪ್ರೇಕ್ಷಕರು ಹಾಗು ವಿಮರ್ಶಕರು. ಹಾಗಾಗಿ ತೇಜಸ್ ಕಂಗನಾ ಹಾರಿಸಿದ ತೇಜಸ್ ಹಾರುವ ಮೊದಲೇ ಇನ್ನಿಲ್ಲದಂತೆ ಪತನಗೊಂಡಿದೆ. ಆ ಚಿತ್ರ ಫ್ಲಾಪ್ ಆಗಿದೆ ಅಂದ್ರೆ ಸುಳ್ಳು ಹೇಳಿದ ಹಾಗಾಗುತ್ತೆ.

ಅದು ಸೂಪರ್ ಡೂಪರ್ ಫ್ಲಾಪ್ ಆಗಿದೆ. ಹೇಳ ಹೆಸರಿಲ್ಲದಂತೆ ಮುಳುಗಿದೆ.

ಮೊದಲ ದಿನವೇ ಪ್ರೇಕ್ಷಕರಿಲ್ಲದೆ ಚಿತ್ರದ 95% ಶೋಗಳು ಕ್ಯಾನ್ಸಲ್ ಆಗೋದು ಅಂದ್ರೆ ಕಂಗನಾ ತರದ ಸ್ವಯಂ ಘೋಷಿತ ಸೂಪರ್ ಸ್ಟಾರ್ ಗೆ ಅದೆಂತಹ ದೊಡ್ಡ ಅವಮಾನ. ಮೊದಲ ದಿನದ ಚಿತ್ರದ ಗಳಿಕೆ ಎಷ್ಟು ಗೊತ್ತಾ ? ಕೇವಲ ಒಂದೂ ಕಾಲು ಕೋಟಿ ರೂಪಾಯಿ.

ಚಿತ್ರದ ಮೂರನೇ ದಿನ ಅದೂ ಸಂಡೇ ಚಿತ್ರ ಗಳಿಸಿದ್ದೂ ಕೇವಲ ಒಂದೂ ಕಾಲು ಕೋಟಿ . ಒಟ್ಟಿಗೆ ಮೂರು ದಿನಗಳಲ್ಲಿ ಚಿತ್ರದ ಗಳಿಕೆ 3.8 ಕೋಟಿ ರೂಪಾಯಿ ಅಂದ್ರೆ ಈ ಚಿತ್ರ ಅದೆಂತಹ ಘೋರ ವೈಫಲ್ಯ ಕಂಡಿದೆ ಅಂತ ನೀವೇ ಊಹಿಸಿ.

ಚಿತ್ರ ಈ ಪರಿ ಸೋತಿದ್ದನ್ನು ಕಂಡು ಕಂಗೆಟ್ಟ ಕಂಗನಾ ಮೊನ್ನೆ ವೀಡಿಯೊ ಮಾಡಿ ಕೊರೊನದಿಂದಾಗಿ ಜನ ಥಿಯೇಟರ್ ಗೆ ಬರುತ್ತಿಲ್ಲ ಎಂದು ಹೇಳಿರುವುದು ಇನ್ನಷ್ಟು ಚಿಂತಾಜನಕ ಸ್ಥಿತಿಯಾಗಿ ಜನರಿಗೆ ಕಂಡಿದೆ. ಪಠಾಣ್, ಜವಾನ್ ಚಿತ್ರಗಳು ಇಷ್ಟು ದೊಡ್ಡ ಯಶಸ್ಸು ಗಳಿಸಿರುವಾಗ ಜನ ಥಿಯೇಟರ್ ಗೆ ಬರುತ್ತಿಲ್ಲ ಎಂದು ಹೇಳಿದರೆ ಯಾರಾದರೂ ಏನು ಹೇಳಿಯಾರು ?

ಬೇರೆಲ್ಲ ಯಾಕೆ, ಕಂಗನಾ ಪಡೆಯ ಫೆವರಿಟ್ ಚಿತ್ರಗಳಾದ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಯಂತಹ ಚಿತ್ರಗಳೂ ಹಿಟ್ ಆಗಿ ಭಾರೀ ಲಾಭ ಬಾಚಿಕೊಂಡಿವೆ. ಈಗ್ಲಾದರೂ ಬಂದು ಚಿತ್ರವನ್ನು ನೋಡಿ, ನಿಮಗದು ಇಷ್ಟವಾಗುತ್ತದೆ ಎಂದು ಕಂಗನಾ ವೀಡಿಯೋದಲ್ಲಿ ಅಂಗಲಾಚಿದ್ದಾರೆ. ಬೇರೆಯವರನ್ನು ಅವಹೇಳನ ಮಾಡುವುದನ್ನೇ ಚಾಳಿಯಾಗಿಸಿಕೊಂಡಿರುವ ಕಂಗನಾ ಆ ವೀಡಿಯೋದಲ್ಲಿ ಅನಿವಾರ್ಯವಾಗಿ ಉರಿ, ನೀರ್ಜಾ ದಂತಹ ಒಳ್ಳೆಯ ಚಿತ್ರ ನನ್ನದು ಎಂದು ಹೇಳಿದ್ದಾರೆ.

ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿರುವ ನಟ ಪ್ರಕಾಶ್ ರಾಜ್ " ನಿಮ್ಮ ಪ್ರಕಾರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ 2014 ರಲ್ಲಿ ಅಲ್ವಾ ... ಜನ ಥಿಯೇಟರ್ ಗೆ ಬರ್ತಾರೆ.. ಸ್ವಲ್ಪ ಕಾಯಿರಿ " ಎಂದು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕಂಗನಾ ಬಿಜೆಪಿ ಹಾಗು ಸಂಘ ಪರಿವಾರದ ದ್ವೇಷ ಭಾಷಣಕಾರ್ತಿಯಾಗಿಯೇ ಹೆಚ್ಚು ಗುರುತಿಸಲ್ಪಟ್ಟಿದ್ದಾರೆ. ಅವರು ನಟಿಯಾಗಿ ಜನರನ್ನು ಸೆಳೆಯುತ್ತಿದ್ದ ಕಾಲವೊಂದಿತ್ತು. ಅದು ಈಗಿಲ್ಲ. ತೇಜಸ್ ನಲ್ಲೂ ಕಂಗನಾ ನಟನೆ ಚಿಂತಾಜನಕವಾಗಿದೆ ಎಂದೇ ಜನ ಹೇಳುತ್ತಿದ್ದಾರೆ.

ಈಗ ಏನಿದ್ದರೂ ಟ್ರೋಲ್ ಕಂಗನಾ, ದ್ವೇಷ ಭಾಷಣಕಾರ್ತಿ ಕಂಗನಾ, ಬಿಜೆಪಿ ಭಟ್ಟಂಗಿ ಕಂಗನಾ, ಮುಸ್ಲಿಂ ದ್ವೇಷಿ ಕಂಗನಾ - ಇವೇ ಜನರಿಗೆ ಕಾಣ್ತಾ ಇರೋದು. ಕಂಗನಾಗೆ ಗಾಯದ ಮೇಲೆ ಬರೆ ಎಂಬಂತಹ ಅನುಭವ ಈಗಾಗಿದೆ. ವಿಕ್ರಾಂತ್ ಮಾಸೇಯ್ ಎಂಬ ಉದಯೋನ್ಮುಖ ನಟನನ್ನು ಕಂಗನಾ ಈ ಹಿಂದೆ ಜಿರಳೆ ಎಂದು ಅವಹೇಳನ ಮಾಡಿದ್ರು. ಈಗ ಅದೇ ವಿಕ್ರಾಂತ್ ಮುಖ್ಯ ಪಾತ್ರದಲ್ಲಿರುವ ಟ್ವೆಲ್ತ್ ಫೇಲ್ ಸಿನಿಮಾ ಯಶಸ್ವಿಯಾಗಿ ಪಾಸಾಗಿದೆ. ಆದರೆ ಅದೇ ನಟನ ಎದುರು ಕಂಗನಾ ಸಿನಿಮಾ ಸಂಪೂರ್ಣ ಫೈಲ್ ಆಗಿದೆ.

ತೇಜಸ್ ಜೊತೆ ಕಂಗನಾ ಫ್ಲಾಪ್ ಚಿತ್ರಗಳ ಸಂಖ್ಯೆ ಡಝನ್ ತಲುಪುತ್ತಿದೆ. ಇತ್ತೀಚಿನ ಅವರ ಚಿತ್ರಗಳು ಯಾವುದು ಎಂದು ಕೇಳಿದರೇ ಹೆಸರು ಹೇಳಲು ತಡಕಾಡುವ ಪರಿಸ್ಥಿತಿ ಇದೆ. ಆದರೂ ಕಂಗನಾ ಅದೇ ದ್ವೇಷದ ಧಾಟಿಯಲ್ಲೇ ಮಾತಾಡುತ್ತಿದ್ದಾರೆ. " ನನಗೆ ಕೇಡು ಬಯಸುವವರ ಜೀವನವು ಎಂದೆಂದಿಗೂ ಶೋಚನೀಯವಾಗಿರುತ್ತದೆ. ಏಕೆಂದರೆ ಅವರು ತಮ್ಮ ಜೀವನದುದ್ದಕ್ಕೂ ಪ್ರತಿದಿನ ನನ್ನ ವೈಭವವನ್ನು ನೋಡಬೇಕಾಗುತ್ತದೆ. ಅವರ ಮಾನಸಿಕ ಆರೋಗ್ಯಕ್ಕಾಗಿ ಅವರು ನನ್ನ ಫ್ಯಾನ್ ಕ್ಲಬ್ ಸೇರಿಕೊಳ್ಳಲಿ ಎಂದು ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆಯೇ ಅವರ ಹೊಸ ಸಿನಿಮಾಕ್ಕಿಂತ ಹೆಚ್ಚು ಓಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News

ಮನದೆಳೆ