ವಿಪಕ್ಷ ನಾಯಕರು, ಪತ್ರಕರ್ತರಿಗೆ ಆ್ಯಪಲ್ ನಿಂದ ಎಚ್ಚರಿಕೆ ಸಂದೇಶ
ಅಕ್ಟೋಬರ್ 30, 2023 ರಾತ್ರಿ 11.45. ಬಹಳಷ್ಟು ಪ್ರಮುಖ ಪ್ರತಿಪಕ್ಷ ನಾಯಕರು ಮತ್ತು ಕೆಲವು ಹಿರಿಯ ಪತ್ರಕರ್ತರಿಗೆ ಆಪಲ್‌ನಿಂದ ಒಂದು ಸಂದೇಶ ಬರುತ್ತದೆ. ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ರಿಮೋಟ್‌ನಿಂದ ನಿಮ್ಮ ಐಫೋನ್‌ನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ಧಾರೆ ಎಂಬ ಎಚ್ಚರಿಕೆ ಸಂದೇಶ ಅದಾಗಿತ್ತು.
ಈ ವ್ಯಕ್ತಿಗಳನ್ನು ಅವರು ಯಾರು ಅಥವಾ ಅವರು ಏನು ಮಾಡುತ್ತಾರೆ ಎಂಬ ಕಾರಣದಿಂದ ವ್ಯಕ್ತಿಗತವಾಗಿ ಗುರಿ ಮಾಡಲಾಗುತ್ತಿದೆ ಎಂದೂ ಆ ನೋಟಿಫಿಕೇಷನ್ ಹೇಳಿತ್ತು. ಐಫೋನ್‌ಗಳಲ್ಲಿ 'ಲಾಕ್‌ಡೌನ್ ಮೋಡ್' ಸೌಲಭ್ಯವನ್ನು ಸಕ್ರಿಯಗೊಳಿಸುವುದೂ ಸೇರಿದಂತೆ ಡೇಟಾ ರಕ್ಷಿಸಿಕೊಳ್ಳುವ ಎಲ್ಲ ಇತರ ಸಲಹೆಗಳನ್ನೂ ಆ ಸಂದೇಶ ಒಳಗೊಂಡಿತ್ತು.
ಕೆಲವು ಚಟುವಟಿಕೆಗಳು ಸರ್ಕಾರಿ ಪ್ರಾಯೋಜಿತ ದಾಳಿಯನ್ನು ಹೋಲುತ್ತವೆ ಎಂಬಂತೆ ಕಂಡಾಗ ಇಂಥ ಸ್ವಯಂಚಾಲಿತ ನೋಟಿಫಿಕೇಷನ್ಗಳನ್ನು ಆಪಲ್ ರೂಪಿಸಿರುವ ಸಿಸ್ಟಮ್ 2021ರ ನಂತರದಿಂದ ಕಳಿಸುತ್ತಿದೆ. ಇಲ್ಲಿಯವರೆಗೆ 150 ದೇಶಗಳಲ್ಲಿನ ಬಳಕೆದಾರರಿಗೆ ಅದು ಇಂಥ ಎಚ್ಚರಿಕೆ ಸಂದೇಶಗಳನ್ನು ಕಳಿಸಿದೆ. ಯಾರ್ಯಾರಿಗೆಲ್ಲ, ಅವರ ಐಫೋನ್ ಹ್ಯಾಕಿಂಗ್ ಯತ್ನ ನಡೆದಿದೆ ಎಂಬ ಆಪಲ್ ಎಚ್ಚರಿಕೆ ಸಂದೇಶ ಬಂತು?
ಇಂಥ ಸಂದೇಶ ಬಂದಿರುವುದನ್ನು ಈಗಾಗಲೇ ಖಚಿತಪಡಿಸಿರುವವರೆಂದರೆ,
1. ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ
2. ಪ್ರಿಯಾಂಕಾ ಚತುರ್ವೇದಿ, ಶಿವಸೇನಾ UBT ಸಂಸದೆ
3. ರಾಘವ್ ಚಡ್ಡಾ, ಎಎಪಿ ಸಂಸದ
4. ಶಶಿ ತರೂರ್, ಕಾಂಗ್ರೆಸ್ ಸಂಸದ
5. ಅಸದುದ್ದೀನ್ ಓವೈಸಿ, ಎಐಎಂಐಎಂ ಸಂಸದ
6. ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
7. ಪವನ್ ಖೇರಾ, ಕಾಂಗ್ರೆಸ್ ವಕ್ತಾರ
8. ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ
9. ಸಿದ್ಧಾರ್ಥ್ ವರದರಾಜನ್, ದಿ ವೈರ್ ಸ್ಥಾಪಕ ಸಂಪಾದಕ
10. ಶ್ರೀರಾಮ್ ಕರ್ರಿ, ಡೆಕ್ಕನ್ ಕ್ರಾನಿಕಲ್ ಸ್ಥಾನಿಕ ಸಂಪಾದಕ
11. ಸಮೀರ್ ಸರನ್, ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ
12. ರೇವತಿ, ಸ್ವತಂತ್ರ ಪತ್ರಕರ್ತೆ
13. ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಸಂಸದ
14. ಸುಪ್ರಿಯಾ ಶ್ರೀನೇತ್ , ಕಾಂಗ್ರೆಸ್ ವಕ್ತಾರೆ
15. ರೇವಂತ್ ರೆಡ್ಡಿ, ಕಾಂಗ್ರೆಸ್ ಸಂಸದ ಹಾಗು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ
16. ಟಿ.ಎಸ್. ಸಿಂಗ್‌ದೇವ್, ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ
17. ರವಿ ನಾಯರ್, ಪತ್ರಕರ್ತ, OCCRP
18. ಕೆ.ಟಿ. ರಾಮರಾವ್, ತೆಲಂಗಾಣ ಸಚಿವ ಮತ್ತು BRS ನಾಯಕ
19. ಆನಂದ್ ಮಂಗ್ನಾಲೆ, ಪ್ರಾದೇಶಿಕ ಸಂಪಾದಕ, ದಕ್ಷಿಣ ಏಷ್ಯಾ, OCCRP
20. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಕಚೇರಿಯಲ್ಲಿ ಕೆಲಸ ಮಾಡುವ ಹಲವರಿಗೂ ಸಂದೇಶ ಬಂದಿದೆ
ಏನಿದು ಆಪಲ್‌ನ 'ಸರ್ಕಾರಿ ಪ್ರಾಯೋಜಿತ ಹ್ಯಾಕರ್ಸ್' ಎಚ್ಚರಿಕೆ?
ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳಿಂದ ಐಫೋನ್ ಹ್ಯಾಕ್ ಮಾಡಿ ಮಾಹಿತಿ ಕದಿಯುವ ನಿರಂತರ ಪ್ರಯತ್ನಗಳು ಪತ್ತೆಯಾದರೆ, ಅದಕ್ಕೆ ಗುರಿಯಾಗಿರುವ ಬಳಕೆದಾರರಿಗೆ ಎಚ್ಚರಿಕೆ ನೀಡುವ ಮತ್ತು ನೆರವಿಗೆ ಬರುವ ಒಂದು ಮಾರ್ಗವೇ ಈ ಅಲರ್ಟ್.
ಯಾರು ಈ ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು?
ಈ ಹ್ಯಾಕರ್ಗಳು ಸರ್ಕಾರಗಳಿಂದ ಬೆಂಬಲಿತರಾಗಿರುವವರು. ನಿರ್ದಿಷ್ಟ ವ್ಯಕ್ತಿಗಳು ಮತ್ತು ಅವರ ಫೋನ್ಗಳನ್ನು ಅವರು ಯಾರು ಮತ್ತು ಏನು ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಗುರಿ ಮಾಡಲು ಈ ಹ್ಯಾಕರ್ಗಳು ಸಾಕಷ್ಟು ಅನುಕೂಲ ಹೊಂದಿರುತ್ತಾರೆ. ಈ ದಾಳಿಗಳು ಸಾಮಾನ್ಯ ಸೈಬರ್ ಕ್ರಿಮಿನಲ್‌ಗಳು ನಡೆಸುವ ದಾಳಿಗಳಿಗಿಂತ ಬಹಳ ಭಿನ್ನವಾಗಿರುತ್ತವೆ. ಅವರು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಆರ್ಥಿಕ ಲಾಭಕ್ಕಾಗಿ ಟಾರ್ಗೆಟ್ ಮಾಡುತ್ತಾರೆ.
ಆಪಲ್ ಪ್ರಕಾರ, ಸರ್ಕಾರಿ ಪ್ರಾಯೋಜಿತ ದಾಳಿಗಳು ಬಲು ದುಬಾರಿ. ಅವು ಹೆಚ್ಚು ಅತ್ಯಾಧುನಿಕ ಮತ್ತು ಸಾಮಾನ್ಯವಾಗಿ ಅಲ್ಪಾವಧಿಗೆ ಸೀಮಿತ.
ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದಂತೆ, ಜನರಿಗೆ ಗೊತ್ತಿರದ ದೌರ್ಬಲ್ಯಗಳನ್ನು ಬಳಸಿಕೊಂಡು ಈ ಹ್ಯಾಕಿಂಗ್ ನಡೆಯುತ್ತದೆ. ಇಂಥ ದಾಳಿಗಳ ಹಿನ್ನೆಲೆಯಲ್ಲಿಯೇ ಆಪಲ್ ಕಂಪನಿ ಕೆಲವು ಮಾದರಿಗಳನ್ನು ಹೋಲುವಂಥ ಚಟುವಟಿಕೆಗಳನ್ನು ಗುರುತಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈಗ ಹಲವರಿಗೆ ಬಂದಿರುವ ಅಲರ್ಟ್ ನೋಟಿಫಿಕೇಷನ್ ಈ ವ್ಯವಸ್ಥೆಯಿಂದ ಬಂದಿದ್ದಾಗಿದೆ. ಆದರೂ, ಈ ಎಚ್ಚರಿಕೆ ಸಂದೇಶಗಳು ತಪ್ಪಾಗಿಯೂ ಬಂದಿರಬಹುದಾದ ಸಾಧ್ಯತೆಗಳನ್ನು ಆಪಲ್ ಇಲ್ಲವೆನ್ನುತ್ತಿಲ್ಲ. ಏಕೆಂದರೆ ಅದು ಬಳಸುವ ಬೆದರಿಕೆ ಗುಪ್ತಚರ ಸಂಕೇತಗಳು ಯಾವಾಗಲೂ ಪರಿಪೂರ್ಣ ಎನ್ನಲು ಬರುವುದಿಲ್ಲ.
ಆಪಲ್ ರೂಪಿಸಿರುವ ಈ ವ್ಯವಸ್ಥೆ, ಹ್ಯಾಕಿಂಗ್ ಯತ್ನಗಳನ್ನು ಪತ್ತೆಹಚ್ಚಿದಾಗ, ಅದು ನಿಗದಿತ ಬಳಕೆದಾರರ ಆಪಲ್ ID ಗೆ ಲಿಂಕ್ ಆಗಿರುವ ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳಿಗೆ ಇಮೇಲ್ ಮತ್ತು i Message ಮೂಲಕ ಬೆದರಿಕೆ ನೋಟಿಫಿಕೇಷನ್ ಅನ್ನು ಕಳಿಸುತ್ತದೆ.
ಇಂಥ ಅಲರ್ಟ್ ಬಂದಾಗ ಬಳಕೆದಾರರಿಗೆ ಆಪಲ್ ಸಲಹೆ ಏನು?
ಇಂಥ ಅಲರ್ಟ್ ಸಂದೇಶ, ಬಳಕೆದಾರರು ತಮ್ಮ ಐಫೋನ್ ರಕ್ಷಿಸಿಕೊಳ್ಳಲು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಬಹುದಾದ ಕೆಲವು ಹೆಚ್ಚುವರಿ ಕ್ರಮಗಳೇನು ಎಂಬುದನ್ನೂ ಒಳಗೊಂಡಿರುತ್ತದೆ.
ಆಪಲ್ ಶಿಫಾರಸು ಮಾಡುವ ಕೆಲವು ಸಾಮಾನ್ಯ ಭದ್ರತಾ ಸಲಹೆಗಳು ಏನೆಂದರೆ, ಇತ್ತೀಚಿನ ಸಾಫ್ಟ್ವೇರ್ ಆವೃತ್ತಿಗಳಿಗೆ ಅಪ್ಡೇಟ್ ಆಗುವುದು ಮತ್ತು ಪಾಸ್‌ಕೋಡ್ ಅನ್ನು ಹೊಂದಿಸುವುದು. ಟು ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ಸಕ್ರಿಯಗೊಳಿಸುವುದು
ಆಪಲ್ ID ಗಾಗಿ ಬಲಿಷ್ಠ ಪಾಸ್‌ವರ್ಡ್ ಅನ್ನು ಬಳಸುವುದು. ಆಪ್ ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕು
ಪ್ರತಿ ಆನ್‌ಲೈನ್ ಖಾತೆಗೆ ವಿಭಿನ್ನ ಪಾಸ್‌ವರ್ಡ್‌ಗಳನ್ನು ಬಳಸಬೇಕು. ಅಪರಿಚಿತ ಮೂಲಗಳ ಲಿಂಕ್‌ಗಳು ಅಥವಾ ಅಟ್ಯಾಚ್ಮೆಂಟ್ಗಳ ಮೇಲೆ ಕ್ಲಿಕ್ ಮಾಡಕೂಡದು.
ಇವುಗಳ ಜೊತೆಗೆ, ಆಪಲ್ ಲಾಕ್‌ಡೌನ್ ಮೋಡ್ ಅನ್ನು ಸಕ್ರಿಯಗೊಳಿಸಲು ಸಹ ಸೂಚಿಸಲಾಗುತ್ತದೆ.
ಇದು ಇಂಥ ಅಪರೂಪದ ಮತ್ತು ಅತ್ಯಾಧುನಿಕ ಸೈಬರ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಫೀಚರ್ ಆಗಿದೆ.
ಆಪಲ್‌ನ ಲಾಕ್‌ಡೌನ್ ಮೋಡ್ ಎಂದರೇನು? ಅದನ್ನು ಆನ್ ಮಾಡುವುದು ಹೇಗೆ?
ಲಾಕ್‌ಡೌನ್ ಮೋಡ್ ಎಂಬುದು ಆಪಲ್ ತನ್ನ ಇತ್ತೀಚಿನ ಸಾಫ್ಟ್ವೇರ್ ಅಪ್ಡೇಟ್ಗಳಲ್ಲಿ ಪರಿಚಯಿಸಿರುವ ವಿಶೇಷ ಸೌಲಭ್ಯ.
ಬಳಕೆದಾರರ ಡಿವೈಸ್ ಮತ್ತು ಡೇಟಾವನ್ನು ಹ್ಯಾಕ್ ಮಾಡುವ ಅತ್ಯಾಧುನಿಕ ಸ್ಪೈವೇರ್ ದಾಳಿಗಳಿಂದ ರಕ್ಷಿಸಲೆಂದೇ ಇದನ್ನು ರೂಪಿಸಲಾಗಿದೆ.
ನೀವು ಲಾಕ್ಡೌನ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗ, ನಿಮ್ಮ ಐಫೋನ್ ಹೆಚ್ಚಿನ ಭದ್ರತೆಯನ್ನು ಪಡೆಯುತ್ತದೆ. ಅಲ್ಲಿ ಅನೇಕ ಸಾಮಾನ್ಯ ಕಾರ್ಯಗಳನ್ನು ನಿರ್ಬಂಧಿಸಲಾಗುತ್ತದೆ ಅಥವಾ ನಿಷ್ಕ್ರಿಯಗೊಳಿಸಲಾಗುತ್ತದೆ. ಉದಾಹರಣೆಗೆ, ಹ್ಯಾಕರ್ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವುದನ್ನು ತಡೆಯುವಂತೆ, ಸಂದೇಶಗಳಲ್ಲಿ ಅಟ್ಯಾಚ್ಮೆಂಟ್ಗಳು, ಲಿಂಕ್‌ಗಳು ಅಥವಾ ಲಿಂಕ್ ಪ್ರಿವ್ಯೂಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ಲಾಕ್‌ಡೌನ್ ಮೋಡ್ iOS 16 ಅಥವಾ ಅನಂತರದ ಆವೃತ್ತಿಗಳಾಗಿರುವ iPad OS 16 ಅಥವಾ watch OS 10 ಅಥವಾ mac OS Ventura ಅಥವಾ ಇನ್ನೂ ಈಚಿನ ಸಾಧನಗಳಲ್ಲಿ ಮಾತ್ರ ಲಭ್ಯವಿದೆ. ಈ ರೀತಿಯ ಸ್ಪೈವೇರ್ ದಾಳಿಗಳು ಬಹಳ ಅಪರೂಪ ಮತ್ತು ನಿರ್ದಿಷ್ಟ ವ್ಯಕ್ತಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತವೆ ಎಂದು ಆಪಲ್ ಹೇಳುತ್ತದೆ.
ನಿಮ್ಮ ಐಫೋನ್ ಅಥವಾ ಡೇಟಾ ಅಪಾಯದಲ್ಲಿದೆ ಎಂಬ ಅನುಮಾನ ನಿಮಗೆ ಬಂದಲ್ಲಿ ನೀವು ಲಾಕ್ಡೌನ್ ಮೋಡ್ ಆನ್ ಮಾಡಬಹುದು.
ಅದಕ್ಕಾಗಿ ಮಾಡಬೇಕಿರುವುದು ಏನೆಂದರೆ, ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಪ್ರೈವಸಿ ಅಂಡ್ ಸೆಕ್ಯೂರಿಟಿ ಆಯ್ಕೆ ಮಾಡಿ.
ಅಲ್ಲಿ ಲಾಕ್‌ಡೌನ್ ಮೋಡ್‌ಗೆ ಹೋಗಿ ಲಾಕ್‌ಡೌನ್ ಮೋಡ್ ಅನ್ನು ಆನ್ ಮಾಡಿ.
ಆಪಲ್‌ನ ಸರ್ಕಾರಿ ಪ್ರಾಯೋಜಿತ ದಾಳಿ ಎಚ್ಚರಿಕೆಗಳನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳಬೇಕು?
ಸರಕಾರಿ ಪ್ರಾಯೋಜಿತ ಹ್ಯಾಕರ್ಗಳು ಸುಧಾರಿತ ಪರಿಕರಗಳು ಮತ್ತು ತಂತ್ರಗಳನ್ನು ಬಳಸಬಲ್ಲರು.
ಭದ್ರತಾ ಕ್ರಮಗಳಿಂದ ಪತ್ತೆಹಚ್ಚಲಾಗದಂತೆ ಅವರು ತಮ್ಮ ವಿಧಾನಗಳನ್ನು ನಿರಂತರವಾಗಿ ಬದಲಿಸಿಕೊಳ್ಳುತ್ತಾರೆ ಮತ್ತು ಅಭಿವೃದ್ಧಿಪಡಿಸುತ್ತಾರೆ.
ಅಲರ್ಟ್ ಬಗ್ಗೆ ಆಪಲ್ ಹೇಳಿದ್ದೇನು?
ಇದು ಯಾವುದೇ ನಿರ್ದಿಷ್ಟ ದೇಶದ ಸರ್ಕಾರದ ದಾಳಿ ಎನ್ನಲು ಬರುವುದಿಲ್ಲ. ಯಾವುದೇ ನಿರ್ದಿಷ್ಟ ಸರ್ಕಾರದಿಂದ ಹ್ಯಾಕಿಂಗ್ ಯತ್ನ ನಡೆದಿದೆ ಎನ್ನಲಾಗದು. ಅಂತಹ ದಾಳಿಗಳನ್ನು ಪತ್ತೆಹಚ್ಚುವುದು ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಕೆಲವು ಆಪಲ್ ಅಲರ್ಟ್ಗಳು ಸುಳ್ಳು ಎಚ್ಚರಿಕೆಗಳಾಗಿರಬಹುದು ಇನ್ನು ಕೆಲವು ದಾಳಿಗಳು ಪತ್ತೆಯಾಗದೆಯೂ ಇರಬಹುದು.
ಈ ಎಚ್ಚರಿಕೆ ಸಂದೇಶಕ್ಕೆ ಕಾರಣ ಏನೆಂಬುದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಆಪಲ್ ತನ್ನ ಬೆದರಿಕೆ ನೋಟಿಫಿಕೇಷನ್ಗಳನ್ನು ಕಳಿಸುವ ನಿಖರವಾದ ಮಾನದಂಡ ಅಥವಾ ಪುರಾವೆಗಳನ್ನು ಬಹಿರಂಗಪಡಿಸುವುದಿಲ್ಲ. ಏಕೆಂದರೆ ಹಾಗೆ ಮಾಡಿದಲ್ಲಿ ಅದು ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳ ಭವಿಷ್ಯದ ದಾಳಿಯಿಂದ ಬಳಕೆದಾರರನ್ನು ರಕ್ಷಿಸುವ ಕ್ರಮಕ್ಕೆ ಹೊಡೆತ ಬೀಳಬಹುದು. ಆದರೆ ನಿಮಗೆ ಆಪಲ್ನಿಂದ ಬೆದರಿಕೆ ನೋಟಿಫೀಕೇಷನ್ ಬಂದಲ್ಲಿ ನೀವು ಅದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಿಮ್ಮ ಐಫೋನ್ ಮತ್ತು ಖಾತೆಯನ್ನು ಸುರಕ್ಷಿತಗೊಳಿಸಲು ಶಿಫಾರಸು ಮಾಡಿದ ಕ್ರಮಗಳನ್ನು ಅನುಸರಿಸಬೇಕು.
ವಿಪಕ್ಷ ನಾಯಕರ ಆರೋಪಗಳೇನು?
ಆಪಲ್ನಿಂದ ಅಂಥದೊಂದು ಸಂದೇಶ ಬರುತ್ತಿದ್ದಂತೆ ಮಹುವಾ ಮೊಯಿತ್ರಾ, ಪ್ರಿಯಾಂಕ ಚತುರ್ವೇದಿ, ಸೀತಾರಾಂ ಯೆಚೂರಿ, ಪವನ್ ಖೇರಾ ಸೇರಿದಂತೆ ಹಲವಾರು ನಾಯಕರು ತಮಗೆ ಇಂಥ ಸಂದೇಶಗಳು ಬಂದಿವೆ ಎಂದು ಆರೋಪಿಸಿದರು. ತಮಗೆ ಬಂದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ನಾಯಕರ ಐಫೋನ್‌ಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಆರೋಪಿಸಲಾಯಿತು. ನನ್ನ ಕಚೇರಿಯಲ್ಲಿ ಹಲವರಿಗೆ ಈ ಸಂದೇಶ ಬಂದಿದೆ. ಬಿಜೆಪಿ ಯುವಕರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಏನು ಹೇಳುತ್ತಿದೆ?
ಆದರೆ, ವಿಪಕ್ಷ ನಾಯಕರ ಆರೋಪಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.
ಇದು ತಪ್ಪು ಎಚ್ಚರಿಕೆಯಾಗಿರಬಹುದು ಎಂದು ಆಪಲ್ ಕಂಪನಿಯೇ ಹೇಳಿರುವುದನ್ನು ಕೇಂದ್ರ ಐಟಿ ಸಚಿವ ಅಶ್ವಿನಿ ವೃಷ್ಣವ್ ಉಲ್ಲೇಖಿಸಿದ್ದಾರೆ.
ಸಂದೇಶದ ಮೂಲ ತಿಳಿಯಲು ತನಿಖೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ. ವಿರೋಧ ಪಕ್ಷಗಳು ಗೊಂದಲದ ರಾಜಕೀಯ ಮಾಡುತ್ತಿವೆ ಎಂದು ಅವರು ಟೀಕಿಸಿದ್ದಾರೆ.
ಇಲ್ಲಿ ಒಂದು ಗಮನಾರ್ಹ ವಿಷಯವೇನೆಂದರೆ ಅಲರ್ಟ್ ಪಡೆದಿರುವವರಲ್ಲಿ ಎಲ್ಲರೂ ವಿಪಕ್ಷದವರು ಹಾಗು ಮೋದಿ ಸರಕಾರ ಹಾಗು ಅದಕ್ಕೆ ಆಪ್ತರ ವಿರುದ್ಧ ತನಿಖಾ ವರದಿ, ಲೇಖನ ಇತ್ಯಾದಿಗಳನ್ನು ಬರೆದ ಪತ್ರಕರ್ತರು. ಮಹುಆ ಈಗಾಗಲೇ ಸಂಸತ್ತಿನಲ್ಲಿ ಅದಾನಿ ವಿರುದ್ಧ ಮಾತಾಡಿ ವಿವಾದದಲ್ಲಿ ಸಿಲುಕಿದ್ದಾರೆ. ದಿ ವೈರ್ ಈಗಾಗಲೇ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿರುವ ವೆಬ್ ತಾಣ. OCCRP ಅದಾನಿ ಕುರಿತು ಇತ್ತೀಚಿಗೆ ತನಿಖಾ ವರದಿ ಪ್ರಕಟಿಸಿದ್ದು ಭಾರೀ ಚರ್ಚೆಯಲ್ಲಿತ್ತು. ಪಟ್ಟಿಯಲ್ಲಿರುವ ಕೆಲವು ವಿಪಕ್ಷ ನಾಯಕರು ಚುನಾವಣೆ ನಡೆಯಲಿರುವ ಛತ್ತೀಸ್ ಗಢ , ತೆಲಂಗಾಣ ರಾಜ್ಯದವರು. ರಾಹುಲ್ ಗಾಂಧಿ ಬಿಜೆಪಿ , ಮೋದಿ ಹಾಗು ಅದಾನಿ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಅವರ ಕಚೇರಿಯ ಹಲವರಿಗೆ ಅಲರ್ಟ್ ಬಂದಿದೆ.
ಹಾಗಾಗಿ ವಿಪಕ್ಷದವರು, ಮೋದಿ ಟೀಕಾಕಾರ ರಾಜಕಾರಣಿಗಳು, ವಸ್ತುನಿಷ್ಠ ಪತ್ರಕರ್ತರು, ತನಿಖಾ ವರದಿಗಾರರ ಐಫೋನ್ ಗೇ ಯಾಕೆ ಈ ಅಲರ್ಟ್ ಬಂತು ? ಬಿಜೆಪಿ ನಾಯಕರು ಹಾಗು ಭಟ್ಟಂಗಿ ಆಂಕರ್ ಗಳ ಐಫೋನ್ ಗೂ ಇಂತಹ ಅಲರ್ಟ್ ಬರಲಿಲ್ಲ ಏಕೆ ? ಅದು ಕೇವಲ ಕಾಕತಾಳೀಯವೇ ?
ಈ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ. ಆದರೆ ಉತ್ತರಿಸುವವರು ಯಾರು ?