×
Ad

ʼದಸರಾʼ ಗಜಪಡೆಗಳ ತೂಕ ಪರೀಕ್ಷೆ : ಸುಗ್ರೀವ ಬಲಶಾಲಿ

Update: 2025-08-26 23:47 IST

ಮೈಸೂರು, ಆ.26 : ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ 14 ಆನೆಗಳ ಪೈಕಿ ದೇಹತೂಕದಲ್ಲಿ ಸುಗ್ರೀವ ಅಗ್ರಸ್ಥಾನದಲ್ಲಿದ್ದರೆ, ಶ್ರೀಕಂಠ ದ್ವಿತೀಯ ಸ್ಥಾನದಲ್ಲಿದ್ದಾನೆ.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ವೈಭವಯುತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ 14 ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ. ಮೊದಲ ತಂಡದ 9 ಆನೆಗಳ ಈಗಾಗಲೇ ನಗರದಲ್ಲಿ ತಾಲೀಮು ಮಾಡುತ್ತಿದ್ದು, ಎರಡನೇ ತಂಡದಲ್ಲಿ 5 ಆನೆಗಳು ಸೋಮವಾರ ಮೈಸೂರಿಗೆ ಬಂದವು.  ಮಂಗಳವಾರ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು.

ಸುಗ್ರೀವ 5545 ಕೆ.ಜಿ. ತೂಕದೊಂದಿಗೆ ಇಡೀ ದಸರಾ ಗಜಪಡೆಯಲ್ಲೇ ಅತಿ ತೂಕದ ಆನೆ ಎಂಬ ಹೆಗ್ಗಳಿಕೆ ಗಳಿಸಿದ. ದೈತ್ಯದೇಹಾಕೃತಿ ಹೆಸರುವಾಸಿಯಾದ ಶ್ರೀಕಂಠ, ತೂಕ ಪರೀಕ್ಷೆಯಲ್ಲಿ 5540 ಕೆ.ಜಿ. ತೂಕದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ. ಗೋಪಿ 4990 ಕೆ.ಜಿ. ತೂಕವಿದ್ದಾನೆ. ಉಳಿದಂತೆ ಹೆಣ್ಣಾನೆ ರೂಪಾ 3320 ಕೆ.ಜಿ. ಇದ್ದರೆ, ಇಡೀ ಗಜ ಪಡೆಯ ಕಿರಿಯ ಆನೆ ಹೇಮಾವತಿ 2440 ಕೆ.ಜಿ. ತೂಕವಿದ್ದಾಳೆ.

ಮೊದಲ ತಂಡದ ಆನೆಗಳ ಪೈಕಿ ಭೀಮ 5,465 ಕೆ.ಜಿ. ತೂಗುವ ಮೂಲಕ ಬಲುಭಾರದ ಆನೆ ಎನಿಸಿಕೊಂಡಿದ್ದ. ಗಜಪಡೆಯ ಕ್ಯಾಪ್ಟನ್ ಹಾಗೂ ಅಂಬಾರಿ ಹೊರುವ ಪ್ರಮುಖ ಆನೆ ಅಭಿಮನ್ಯು 5,360 ಕೆ.ಜಿ. ತೂಕ ಇದ್ದಾನೆ.

ತಾಲೀಮು ಮುಂದುವರಿಕೆ: ಅರಮನೆ ಅಂಗಳದಿಂದ ಹೊರಟ ಆನೆಗಳು ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಾಗಿ ಧನ್ವಂತ್ರಿ ರಸ್ತೆಯ ಮೂಲಕ ಸಾಯಿರಾಮ್ ವೇಯಿಂಗ್ ಬ್ರಿಡ್ಜ್‌ಗೆ ಬಂದವು. ನಡಿಗೆ ತಾಲೀಮಿನ ಭಾಗವಾಗಿ ಎಲ್ಲ 14 ಆನೆಗಳೂ ವೇಯಿಂಗ್ ಬ್ರಿಡ್ಜ್‌ಗೆ ಬಂದಿದ್ದವು. ಆದರೆ ಹೊಸದಾಗಿ ಬಂದಿರುವ 5 ಆನೆಗಳನ್ನು ಮಾತ್ರ ತೂಕ ಪರೀಕ್ಷೆ ಮಾಡಲಾಯಿತು. ಪರೀಕ್ಷೆ ಬಳಿಕ ಆನೆಗಳು ಅದೇ ಮಾರ್ಗದಲ್ಲಿ ತಾಲೀಮು ಮುಂದುವರಿಸಿದವು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News