ಸಿಎಂ ಬದಲಾವಣೆ ವಿಚಾರ | ಹೈಕಮಾಂಡ್ ಬಿಟ್ಟು ಬೇರೆ ಯಾರೇ ಮಾತನಾಡಿದರೂ ಅರ್ಥವಿಲ್ಲ : ಎಚ್.ಸಿ.ಮಹದೇವಪ್ಪ
ಎಚ್.ಸಿ.ಮಹದೇವಪ್ಪ
ಮೈಸೂರು : ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ, ಅವರೇ ಮುಂದುವರೆಯುತ್ತಾರೆ. ಹೈಕಮಾಂಡ್ ಬಿಟ್ಟು ಬೇರೆ ಯಾರೇ ಮಾತನಾಡಿದರೂ ಅರ್ಥವಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಯಾಯಾ ಕಾಲಕ್ಕೆ ರಾಜಕೀಯ ನಿರ್ಧಾರಗಳನ್ನು ನಮ್ಮ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಮಗೆ ಹೈಕಮಾಂಡ್ ಇದೆ. ಹೈಕಮಾಂಡ್ ಎಲ್ಲಾ ನಿರ್ಧಾರಗಳನ್ನು ಮಾಡುತ್ತದೆ. ಹೈ ಕಮಾಂಡ್ ಬಿಟ್ಟು ಉಳಿದವರು ಏನೇ ಮಾತನಾಡಿದರು ಅದರಲ್ಲಿ ಪ್ರಯೋಜನವೂ ಇಲ್ಲ, ಅರ್ಥವೂ ಇಲ್ಲ ಎಂದು ತಿಳಿಸಿದರು.
ಕೆಲವು ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವೀಗೀಡಾಗಿರುವುದು ಆತಂಕಕಾರಿ. ಮಾರುಕಟ್ಟೆಗೆ ಔಷಧ ಬಿಡುಗಡೆಗೂ ಮುನ್ನ ಪರೀಕ್ಷಿಸಬೇಕಿತ್ತು. ಈಗ ಔಷಧ ಬಳಸಬೇಡಿ ಎಂದು ಕೇಂದ್ರ ಸರಕಾರ ಹೇಳುವುದು ಸರಿಯಾದ ಕ್ರಮ ಅಲ್ಲ, 11 ಮಕ್ಕಳು ಸಾವನ್ನಪ್ಪಿರುವುದು ವಿಷಾಧಕರ. ಕೇಂದ್ರ ಸರಕಾರ ಈ ಅನಾಹುತ ಸಂಭವಿಸುವ ಮುನ್ನವೇ ಕ್ರಮ ವಹಿಸಬೇಕಿತ್ತು ಎಂದು ಹೇಳಿದರು.
ಅರಮನೆ ಆವರಣದಲ್ಲಿ ಸಿಎಂ, ಡಿಸಿಎಂ, ಸಚಿವರು ತೆರೆದ ಜೀಪ್‌ನಲ್ಲಿ ಆಗಮಿಸುವ ವೇಳೆ ಮೊಮ್ಮಗನನ್ನು ಕರೆದುಕೊಂಡ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ ಅವರು, ಅಲ್ಲಿ ಯಾವ ಪ್ರೋಟೊಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೊಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಅದು ಪೇರೆಡ್ ಅಲ್ಲ, ಮತ್ತು ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ನಂದಿ ಕಂಬ ಪೂಜೆ ಸಲ್ಲಿಸಿ ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.