ಮೈಸೂರಿನಲ್ಲಿ 2014ರಿಂದಲೇ ಜೆಡಿಎಸ್-ಬಿಜೆಪಿ ಅನಧಿಕೃತ ಮೈತ್ರಿ ಇದೆ: ಎಚ್.ಡಿ. ಕುಮಾರಸ್ವಾಮಿ

Update: 2024-03-28 12:49 GMT

ಮೈಸೂರು: ಜೆಡಿಎಸ್-ಬಿಜೆಪಿ ಮೈತ್ರಿ ಹೊಸದೇನಲ್ಲ. ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತ ಮೈತ್ರಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ನಂಜನಗೂಡು ಶ್ರೀನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ತುಲಾಭಾರ ಸೇವೆ ಸಲ್ಲಿಸಿದ ನಂತರ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಇದೆ. ಎರಡೂ ಪಕ್ಣದ ಕಾರ್ಯಕರ್ತರು ಆಗಿನಿಂದಲೇ ಸಮನ್ವಯತೆಯಿಂದ ಇದ್ದಾರೆ. ಈಗಲೂ ಇರುತ್ತಾರೆ. ಹಾಗಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಇಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೋಲುತ್ತಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ಜನ ಉತ್ತರ ಕೊಡುತ್ತಾರೆ. ನಾನು ಸೋಲುತ್ತೇನೆ ಎಂದು ಹೇಳುವ ಸಿದ್ಧರಾಮಯ್ಯ ಯಾವಾಗ ಜ್ಯೋತಿಷಿಯಾದರು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ನೀವು ಯಾರು? ಅಲ್ಲಿ ನೀವು ವಲಸಿಗರಲ್ಲವಾ. ಮೂಲ ಕಾಂಗ್ರೆಸ್ ನವರನ್ನು ಕಸದ ಬುಟ್ಟಿಗೆ ಹಾಕಿ ನೀವು ಅಲ್ಲಿ ಅಧಿಕಾರ ಮಾಡುತ್ತಿಲ್ಲವಾ? ನಾನು ಕನ್ನಡಿಗ. ಎಲ್ಲಿ ಬೇಕಾದರೂ ನಾನು ಸ್ಪರ್ಧೆ ಮಾಡಬಹುದು. ಈ ಬಾರಿ ಮಂಡ್ಯದಲ್ಲಿ ನಮ್ಮ ಹಳೆ ಸ್ನೇಹಿತರ ಜೊತೆ ಸ್ಪರ್ಧೆ ಎದುರಿಸಬೇಕು. ನನ್ನ‌ ಹಣೆಬರಹ ಹಾಗಿದೆ. ಏನು ಮಾಡೋದು. ಹಳೇ ಸ್ನೇಹಿತರುಗಳೇ ನಮಗೆ ವಿರುದ್ಧ ಆಗುತ್ತಾರೆ. ಆಗಲಿ ಬಿಡಿ ಎಂದು ಹೇಳಿದರು.

ಇನ್ನು ಮೇಕೆದಾಟು ಇಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ದೇವೇಗೌಡರನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹೇಳಿದರು.

ಜೆಡಿಎಸ್ ಗೆ ಸುಮಲತಾ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯದಲ್ಲಿ ಹೋರಾಟ, ಜಗಳ ಎಲ್ಲವು ಇದ್ದೇ ಇರುತ್ತದೆ. ಅವನ್ನೆಲ್ಲಾ ಒಮ್ಮೊಮ್ಮೆ ದಾಟಿ ಹೋಗಬೇಕು. ನಮಗೇನು ಸುಮಲತಾ ಬಹಳ ದೂರದವರೇನು ಅಲ್ಲ. ಅಂಬರೀಷ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಯಲ್ಲಿದ್ದವರು. ಅವರ ಮನೆಯಲ್ಲಿ ಊಟ ಮಾಡಿರುವವರು. ರಾಜಕಾರಣಕ್ಕಾಗಿ ಕೆಲವು ವ್ಯತ್ಯಾಸಗಳಾಗಿತ್ತು. ಅಗತ್ಯವಿದ್ದರೆ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News