×
Ad

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಾ.ರಾ.ಮಹೇಶ್ ಗೆ ಟಿಕೆಟ್ ಕೊಡಿಸಲು ಕುಮಾರಸ್ವಾಮಿ ಯತ್ನ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2024-01-09 17:36 IST

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ.ಮಹೇಶ್‌ ಅವರಿಗೆ ಟಿಕೆಟ್‌ ಕೊಡಿಸಲು ಎಚ್‌.ಡಿ. ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ತಿಳಿಸಿದರು.

ನಗರ ಕಾಂಗ್ರೆಸ್‌‍ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಕ್ಷೇತ್ರವನ್ನು ಬಿಜೆಪಿಗೆ ಬಿಡಲು ತಯಾರಿಲ್ಲ. ಸಾ.ರಾ.ಮಹೇಶ್‌ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತಿನಲ್ಲಿಯೇ ಸ್ಪರ್ಧೆ ಬಗ್ಗೆ ಸುಳಿವಿದೆ ಎಂದರು.

ಕುಮಾರಸ್ವಾಮಿ ಅವರು ಕೆಲವು ದಿನಗಳಿಂದ ಪ್ರತಾಪಸಿಂಹ, ಆತನ ಸಹೋದರನ ವಿರುದ್ಧ ಮೃಧು ಧೋರಣೆ ಅನುಸರಿಸುವ ಉದ್ದೇಶ ಏನು?. ವಿಕ್ರಂ ಸಿಂಹ ಬಂಧನದಲ್ಲಿ ದೇವೇಗೌಡ ಕುಟುಂಬದ ಕೈವಾಡ ಇದೆ. ಈ ಬಗ್ಗೆ ಜನರು ಮಾತಾಡುತ್ತಿದ್ದಾರೆ ಎಂದು ಹಾಸನದ ಪತ್ರಿಕೆಯೊಂದು ವರದಿ ಮಾಡಿದೆ ಎಂದರು.

ಕುಮಾರಸ್ವಾಮಿ ಯಾರನ್ನಾದರೂ ಹೊಗಳಿದರೆ ಅವರಿಗೆ ಗಂಡಾಂತರ ಕಾದಿದೆ. ಖೆಡ್ಡಾ ಯಾರು ಯಾರಿಗೆ ತೊಡಿದ್ದಾರೆ ಎಂಬುದನ್ನು ಪ್ರತಾಪ್ ಸಿಂಹ ಮತ್ತು ಬೆಂಬಲಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬೇರೆ ಕಡೆಯಿಂದ ಬೀಟೆ ಮರಗಳನ್ನು ಕಡಿದು ತಂದು ಹಾಕಲು ಅದೇನು ಕಡ್ಲೆಕಾಯಿ ಗಿಡವೇ? ಕುಮಾರಸ್ವಾಮಿ ಅವರು ಸಾಮಾನ್ಯ ಜ್ಞಾನ ಇಲ್ಲದವರಂತೆ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಾರೆ. ಹಿಟ್‌ ಅಂಡ್‌ ರನ್‌ ಹೇಳಿಕೆ ಕೊಡುವುದನ್ನು ಅವರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಎಚ್‌ಡಿಕೆ ಕೇಂದ್ರ ಮಂತ್ರಿ: ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಾಡಲು ಮಾತುಕತೆ ನಡೆಯುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಕ್ಷೇತ್ರಗಳನ್ನು ಕೇಳುತ್ತಿದ್ದಾರೆ. ನಾಲ್ಕರಲ್ಲೂ ಅವರ ಕುಟುಂಬದವರೇ ಸ್ಪರ್ಧೆ ಮಾಡಬೇಕು. ಸುಮಲತಾ ಅಂಬರೀಶ್‌ ಅವರು ಕಾಂಗ್ರೆಸ್‌‍ಗೆ ಬರುವ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಸದ ಪ್ರತಾಪಸಿಂಹ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತುಚ್ಛವಾಗಿ ಮಾತಾಡಿದ್ದಾರೆ. ಮಾಜಿ ಶಾಸಕ, ಅಶ್ರಯ ಸಮಿತಿ ಅಧ್ಯಕ್ಷರ ಕಾನೂನಾತ್ಮಕ ಅಧಿಕಾರದ ಬಗ್ಗೆ ತಿಳಿದು ಮಾತಾಡಬೇಕು. ಸಿದ್ದರಾಮಯ್ಯ ವಿರುದ್ಧ ಒಕ್ಕಲಿಗರನ್ನು ಎತ್ತಿ ಕಟ್ಟುವಂತಹ ಹೇಳಿಕೆ ಕೊಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ರೈತರ ಸಂಕಷ್ಟ ಕೇಳದೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ನ್ಯಾಯಾಲಯ ತೀರ್ಪು ಸ್ವಾಗತ: ಕೆಆರ್‌ಎಸ್‌‍ 20 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಹೈಕೋರ್ಟ್‌ ಆದೇಶವನ್ನು ಸ್ವಾಗತಿಸುತ್ತೇವೆ. ಮಂಡ್ಯ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸಿ ಅಣೆಕಟ್ಟೆಯನ್ನು ರಕ್ಷಿಸಬೇಕು ಎಂದು ತಿಳಿಸಿದರು.

ಯತ್ನಾಳ್‌ ಸನ್ಮಾನಿಸಿ: ಮಾಸ್ಕ್‌, ಕೋವಿಡ್‌ ಕಿಟ್‌ ಸಹಿತವಾಗಿ ವೈದ್ಯ ಉಪಕರಣಗಳ ಖರೀದಿಯಲ್ಲಿ 40 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಸತ್ಯ ಹೇಳುತ್ತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಸರ್ಕಾರದ ವತಿಯಿಂದ ಸನ್ಮಾನ ಮಾಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌‍ ಅಧ್ಯಕ್ಷ ಆರ್‌.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಕೆ. ಮಹೇಶ್‌, ಸೇವಾದಳ ಗಿರೀಶ್‌ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News