×
Ad

ಮೈಸೂರಿನಲ್ಲಿ ವಿಜೃಂಭಣೆಯಿಂದ ಮಹಿಷ ದಸರಾ ಆಚರಣೆ

ಕಂಚಿನ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ, ಅಶೋಕ ಪುತ್ಥಳಿ ಸ್ಥಾಪನೆ

Update: 2025-09-24 23:04 IST

ಮೈಸೂರು: ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ವಿಜೃಂಭಣೆಯಿಂದ ಮಹಿಷ ದಸರಾ ಆಚರಣೆ ಮಾಡಲಾಯಿತು. ನಗರದ ಪುರಭವನದ ಆವರಣದಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಬುಧವಾರ ಕಂಚಿನ ಮಹಿಷ, ಬುದ್ಧ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಇದಕ್ಕೂ ಮೊದಲು ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ವೇದಿಕೆಗೆ ಆಗಮಿಸಿದರು.

ವೇದಿಕೆಯಲ್ಲಿ ಮಹಿಷ ದಸರಾ ಕಾರ್ಯಕ್ರಮವನ್ನು ಪೆರಿಯಾರ್ ಚಳವಳಿ ಹೋರಾಟಗಾರ ಕೋಳ್ತೂರು ಮಣಿ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದವರು, ಜೈ ಮಹಿಷ, ಜೈ ಅಂಬೇಡ್ಕರ್, ಜೈ ಬುದ್ಧ, ಜೈ ಸಂವಿಧಾನ್ ಘೋಷಣೆ ಕೂಗಿದರು. ಕಾರ್ಯಕ್ರಮಕ್ಕೆ ಮೈಸೂರು ನಗರ, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಮಹಿಷನ ಅಭಿಮಾನಿಗಳು ಆಗಮಿಸಿದ್ದರು.

ಗಾಯಕ ಅಮ್ಮ ರಾಮಚಂದ್ರ, ದೇವಾನಂದ ವರಪ್ರಸಾದ್, ಸೇರಿದಂತೆ ಹಲವರು ಕ್ರಾಂತಿ ಗೀತೆ ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.

ಮೈಸೂರಿನ ಯಾವುದಾದರೊಂದು ಪ್ರಮುಖ ಸ್ಥಳದಲ್ಲಿ ಅಶೋಕ ಪುತ್ಥಳಿ ಸ್ಥಾಪಿಸಬೇಕು, ಮೈಸೂರು ದಸರಾ ಆಚರಣೆ ವೇಳೆ ಮಹಿಷ ಪ್ರತಿಮೆಗೂ ಸರಕಾರದ ವತಿಯಿಂದ ಪುಷ್ಪಾರ್ಚನೆ ಮಾಡಬೇಕು, ಮೈಸೂರು ಹೆಸರನ್ನು ಮಹಿಶೂರು ಎಂದು ಬದಲಾಯಿಸಬೇಕು ಎಂಬ ಮೂರು ನಿರ್ಣಯಗಳನ್ನು ಇದೇ ವೇಳೆ ಒಕ್ಕೋರಲಿನಿಂದ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸವಿತಾನಂದ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು, ಲೇಖಕ ಸಿದ್ದಸ್ವಾಮಿ, ಮಾಜಿ ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಸಿದ್ದಪ್ಪ, ಹೋರಾಟಗಾರ ಹರಿಹರ ಆನಂದಸ್ವಾಮಿ, ನಾಗರತ್ನ, ಅಶೋಕಪುರಂ ದಲಿತ ಮಹಾಸಭಾ ಅಧ್ಯಕ್ಷ ಸಿದ್ದರಾಜು, ಹಲವರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್

contributor

Similar News