×
Ad

"ಅಮಾಯಕರನ್ನು ಬಂಧಿಸುವುದಿಲ್ಲ": ಉದಯಗಿರಿ ಠಾಣೆಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭೇಟಿ

Update: 2025-02-13 20:44 IST

ಮೈಸೂರು: ನಗರದ ಉದಯಗಿರಿ ಪೊಲೀಸ್ ಠಾಣೆ ಎದುರು ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಪೊಲೀಸರು ಒಂದು ಸಾವಿರ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಈ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ಪೊಲೀಸರು ಬಂಧಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಗುರುವಾರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕಳೆದ ಸೋಮವಾರ ಸಂಜೆ ವ್ಯಕ್ತಿಯೊಬ್ಬನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬಂದ ಧರ್ಮನಿಂದನೆ ಪೋಸ್ಟ್ ಕುರಿತು ಪೊಲೀಸರು ಸುಮುಟೋ ಕೇಸ್ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಇದೇ ವಿಷಯ ಕುರಿತು ದೂರು ನೀಡಲು ಎರಡು ಗುಂಪುಗಳು ಠಾಣೆಗೆ ಬಂದಿದ್ದರೂ ದೂರು ನೀಡಿಲ್ಲ. ನಂತರ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಗೊಳ್ಳಬಾರದು. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಘಟನೆಯಲ್ಲಿ ಆರೆಸ್ಸೆಸ್ ಕೈವಾಡ ಇದೆ ಎನ್ನುವುದು ನಮಗೆ ಗೊತ್ತಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಡೀ ಪ್ರಕರಣವನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಮಹದೇವಪ್ಪ ಹೇಳಿದರು.

ಮಂಗಳವಾರ ವಿಪಕ್ಷ ನಾಯಕ ಆರ್.ಅಶೋಕ್ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರೊಂದಿಗೆ ರೌಡಿಶಿಟರ್ ಒಬ್ಬರು ಜತೆಯಲ್ಲಿದ್ದು, ಪೊಲೀಸರು ಅವರ ಎದುರು ಗಲಭೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾಡಿರುವ ಆರೋಪ ಕುರಿತು ಮಾತನಾಡಿದ ಸಚಿವರು, ಒಬ್ಬ ಕೊಲೆಗಾರ ನಮಗೆ ಗೊತ್ತಿಲ್ಲದಂತೆ ಬಂದು ನಮ್ಮ ಪಕ್ಕದಲ್ಲಿ ನಿಂತರೆ ನಮಗೆ ಹೇಗೆ ಗೊತ್ತಾಗುತ್ತದೆ ಎಂದು ಉತ್ತರಿಸಿದರು.

ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News