ಮೈಸೂರು: ಮುಖ್ಯ ನ್ಯಾಯಾಧೀರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು: ಸುಪ್ರೀಂ ಕೋಟ್೯ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದ ಘಟನೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ವಕೀಲನ ಬಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಆತನ ಬಾವಚಿತ್ರ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಜಮಾಯಿಸಿದ ದಲಿತರು, ವಕೀಲ ರಾಕೇಶ್ ಕಿಶೋರ್ ವಿರುದ್ಧ ಘೋಷಣೆ ಕೂಗಿ ಇದರ ಹಿಂದೆ ಆರೆಸ್ಸೆಸ್ ಷಡ್ಯಂತ್ರ ಇದೆ ಎಂದು ಅರೋಪಿಸಿದರು.
ಈ ವೇಳೆ ಮಾತನಾಡಿ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, "ಗಾಂಧಿ ಕೊಂದ ಗೋಡ್ಸೆ ಸಂತತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಧರ್ಮದ ಅಫೀಮು ತುಂಬಿಕೊಂಡ ವಕೀಲ ರಾಕೇಶ್ ಕಿಶೋರ್ ಎಂಬಾತ ಸನಾತನ ಧರ್ಮಕ್ಕೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿ ಈ ಕೃತ್ಯ ಎಸಗಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ಮಾಡಿದ ಅವಮಾನ. ಹಾಗಾಗಿ ಆತನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು" ಎಂದು ಒತ್ತಾಯಿಸಿದರು.
ಇದೇ ಮನುವಾದಿಗಳು ಸಂವಿಧಾನ ಜಾರಿಯಾದಾಗ ಅದನ್ನು ಒಪ್ಪದೇ ಹೋರಾಟ ಮಾಡಿದ್ದರು. ಈ ಸಂವಿಧಾನವನ್ನು ಒಪ್ಪದಿದ್ದವರು ಈ ಷಡ್ಯಂತರ ಮಾಡಿದ್ದಾರೆ. ಇವರ ಷಢ್ಯಂತರ ವಿರುದ್ಧ ಅಂಬೇಡ್ಕರ್ ವಾದಿಗಳಾದ ನಾವು ಹೋರಾಟ ಮಾಡಬೇಕಿದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಈ ದೇಶದ ಜನರ ಮೇಲಿದ್ದು, ಬೀದಿಗಿಳಿದು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಸನ್ನಿವೇಶ ಶೀಘ್ರದಲ್ಲೇ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಈ ದೇಶ ಸಂವಿಧಾನದ ಅಡಿಯಲ್ಲಿ ಇದೆ ಹೊರತು ಯಾವುದೇ ಪಕ್ಷದ ಅಡಿಯಲ್ಲಿಲ್ಲ. ದೇಶ ದೊಡ್ಡದೇ ಹೊರತು ಧರ್ಮ ದೊಡ್ಡದಲ್ಲ. ಈ ಕೃತ್ಯ ದಲಿತರ ವಿರುದ್ಧ ನಡೆದಿರುವುದಲ್ಲ, ಈ ದೇಶದ ಸಂವಿಧಾನ ಅಖಂಡತೆಯ ಮೇಲೆ ನಡೆದಿರುವುದು. ಹಾಗಾಗಿ ಎಲ್ಲರು ಒಟ್ಟಾಗಿ ಖಂಡಿಸಬೇಕು ಎಂದು ಹೇಳಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸದಿರುವುದು ಇಡೀ ದೇಶಕ್ಕೆ ಮಾಡಿದ ಅಪಮಾನ. ಈ ದೇಶದಲ್ಲಿ ಸಂವಿಧಾನವೇ ಸುಪ್ರೀಂ ಹೊರತು ಸನಾತನವಾದವಲ್ಲ, ಸನಾತನವಾದ ಮತ್ತು ಅಂಬೇಡ್ಕರ್ ವಾದಿಗಳ ನಡುವೆ ಸಂಘರ್ಷ ನಡೆಯಬೇಕು ಎಂಬುದು ನಿಮ್ಮದಾಗಿದ್ದರೆ ನಾವು ಸಿದ್ಧರಾಗಿಯೇ ಇದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನನ್ನು ಸುಮುಟೊ ಪ್ರಕರಣ ದಾಖಲಿಸಿ ಬಂಧಿಸಬೇಕಿತ್ತು. ಆದರೆ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದರೆ ಆತನ ಹಿಂದೆ ಕೇಂದ್ರ ಸರ್ಕಾರ ಇದೆ ಎಂಬುದು ಗೊತ್ತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಪ್ಪೇ ಮಾಡದ ಹೋರಾಟಗಾರ ಸೋನಮ್ ವಾಂಗ್ಚುಕ್ , ಉಮರ್ ಖಾಲಿದ್ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆದರೆ ಇಂತಹ ಒಂದು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ಮೌನವಹಿಸಿರುವುದು ಸಂವಿಧಾನಕ್ಕೆ ಮಾಡಿದ ದ್ರೋಹ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಂತೇಜಿ, ಮುಖಂಡರುಗಳಾದ ಅಹಿಂದ ಜವರಪ್ಪ, ಲೇಖಕರಾದ ಸಿದ್ಧಸ್ವಾಮಿ, ಸಿ.ಹರಕುಮಾರ್, ಎನ್.ಭಾಸ್ಕರ್, ವಕೀಲ ಕಾಂತರಾಜು, ಮರಿದೇವಯ್ಯ, ಪಲ್ಲವಿ ಬೇಗಂ, ಜೋಗಿ ಮಹೇಶ್, ಅಶೋಕಪುರಂ ರವಿ, ವಕೀಲರಾದ ಉಮೇಶ್, ಪುಟ್ಟಸಿದ್ದೇಗೌಡ, ಆಟೋ ಪುಟ್ಟರಾಜು, ಬಬಿತಾ, ಗೋವಿಂದರಾಜು, ಮಲೆಯೂರು ಸೋಮಯ್ಯ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನದ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಸನಾತನವಾದಿಗಳು, ಬ್ರಾಹ್ಮಣ್ಯವಾದಿಗಳು ಹಿಂದಿನಿಂದಲೂ ದಲಿತರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ. ಇನ್ನುಮುಂದಾದರು ಶೂದ್ರ ಸಮುದಾಯ ಎಚ್ಚೆತ್ತುಕೊಂಡು ಇವರ ಕ್ರಿಯೆಗೆ ಎರಡರಷ್ಟು ಪ್ರತಿಕ್ರಿಯೆ ನೀಡಿ ಬ್ರಾಹ್ಮಣ್ಯವನ್ನು ಧಿಕ್ಕರಿಸಬೇಕು.
- ಅಹಿಂದ ಜವರಪ್ಪ, ಸಾಮಾಜಿಕ ಹೋರಾಟಗಾರ
ಈ ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ಹಾಗಾಗಿಯೇ ಆತ ಇಷ್ಟೊಂದು ಧೈರ್ಯ ಮಾಡಿ ಶೂ ಎಸೆದಿರುವುದು. ಕೂಡಲೇ ಆತನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು.
-ಸಿದ್ಧಸ್ವಾಮಿ, ಲೇಖಕ.
ಈ ಕೃತ್ಯದ ಹಿಂದೆ ಆರೆಸ್ಸೆಸ್ ಮತ್ತು ಸನಾತನವಾದಿಗಳು ಇದ್ದಾರೆ. ದಿಲ್ಲಿ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟದೆ ಬಿಟ್ಟು ಕಳುಹಿಸಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ ಈ ಘಟನೆ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಿಸುತ್ತೇವೆ.
-ಎನ್.ಭಾಸ್ಕರ್, ರಾಜ್ಯಾಧ್ಯಕ್ಷ, ಸಂವಿಧಾನ ಸಂರಕ್ಷಣ ಹೋರಾಟ ಸಮಿತಿ.